ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿ ವಿರುದ್ಧ ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಪೊಲೀಸ್ ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ತಕರಾರು ಅರ್ಜಿಯ ಕುರಿತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಬಳಿಕ ಜಡ್ಜ್ ಸಂತೋಷ್ ಗಜಾನನ ಭಟ್ ಅವರು, ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿ ಅದೇಶಿಸಿದರು.
ಈ ವೇಳೆ ಜಡ್ಜ್ ಸಂತೋಷ ಗಜಾನನ ಭಟ್ ಅವರು ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ, ಪೊಲೀಸರಿಗೆ ತನಿಖೆ ಮುಂದುವರಿಸುವಂತೆ ಸೂಚನೆ ನೀಡಿದರು. ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಬಗ್ಗೆ ಸದ್ಯಕ್ಕೆ ಆದೇಶ ನೀಡಲಿಲ್ಲ. ಅಲ್ಲದೆ ಇಡಿ ಅಧಿಕಾರಿಗಳಿಗೂ ತಕರಾರು ಅರ್ಜಿ ಸಲ್ಲಿಸಬಹುದು ಎಂದು ಇದೆ ವೇಳೆ ಜಡ್ಜ್ ತಿಳಿಸಿದರು. ಬಳಿಕ ಮೇ 7ರಂದು ವಿಚಾರಣೆಯನ್ನು ಮುಂದೂಡಿದರು.
ವಿಚಾರಣೆ ಆರಂಭವಾದಾಗ ಪ್ರಕರಣ ಸಂಬಂಧ ಇಂದು ಕೋರ್ಟ್ ಗೆ ದೂರುದಾರ ಸ್ನೇಹಮಯಿ ಕೃಷ್ಣ , ಇಡಿ ಪರ ವಕೀಲ ಮಧುಕರ ದೇಶಪಾಂಡೆ ಹಾಗು ಲೋಕಾಯುಕ್ತ ಪರವಾಗಿ ವಕೀಲ ವೆಂಕಟೇಶ್ ಅರಬಟ್ಟಿ ಅವರು ಹಾಜರಾಗಿದ್ದಾರೆ. ಅಲ್ಲದೆ ಕೇಸ್ ಗಮನಿಸಲು ಸಿಎಂ ಸಿದ್ದರಾಮಯ್ಯ ಪರ ವಕೀಲ ಶತಬಿಷ ಶಿವಣ್ಣ ಹಾಜರಾಗಿದ್ದಾರೆ.