ಬೆಂಗಳೂರು: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ 90 ಕೋಟಿ ರೂ.ಮೌಲ್ಯದ 8 ಎಂಆರ್ಐ ಉಪಕರಣಗಳ ಖರೀದಿ ಟೆಂಡರ್‌ನಲ್ಲಿ ಬೃಹತ್ ಅಕ್ರಮ ನಡೆದಿದೆ ಎನ್ನುವಂತ ಆರೋಪ ಕೇಳಿ ಬಂದಿದೆ. ಹೀಗಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವಂತೆ ಸಿಎಂ ಸಿದ್ಧರಾಮಯ್ಯ, ಸಚಿವ ಶರಣ ಪ್ರಕಾಶ್ ಪಾಟೀಲ್, ಸಿಎಸ್ ಶಾಲಿನಿ ರಜನೀಶ್ ಅವರಿಗೂ ಪತ್ರದಲ್ಲಿ ಆಗ್ರಹಿಸಲಾಗಿದೆ.
8 ಎಂಆರ್ಐ ಉಪಕರಣಗಳ ಖರೀದಿಗೆ ಸಂಬಂಧಪಟ್ಟಂತೆ ನಿರ್ದೇಶನಾಲಯ, ಏ.11ರಂದು ಟೆಂಡರ್ ನೋಟಿಫಿಕೇಷನ್ ಹೊರಡಿಸಿದೆ. ಏ.26ಕ್ಕೆ ಬಿಡ್ ತೆರೆಯಲು ದಿನ ನಿಗದಿಯಾಗಿದೆ. ನಿರ್ದೇಶನಾಲಯ ಮತ್ತು ಇದರ ವ್ಯಾಪ್ತಿಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳು ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಕಾಯ್ದೆ (ಕೆಟಿಟಿಪಿ) ಅನ್ವಯ ಇ-ಪೋರ್ಟಲ್ನಲ್ಲಿ ಟೆಂಡರ್ ಕರೆಯಬೇಕೆಂಬ ಸರ್ಕಾರದ ನಿಯಮ ಇದೆ.
ಇ-ಪೋರ್ಟಲ್ ಬದಲು ಜೆಮ್ ಪೋರ್ಟಲ್ನಲ್ಲಿ ಟೆಂಡರ್ ಆಹ್ವಾನ
ಹಿಂದೆ ಎಂಆರ್ಐ ಖರೀದಿಗಾಗಿ ನಿರ್ದೇಶನಾಲಯ, ಇ-ಪೋರ್ಟಲ್ನಲ್ಲಿ ಟೆಂಡರ್ ಆಹ್ವಾನಿಸಿ ಕಂಪನಿಗಳಿಗೆ ಕಾರ್ಯಾದೇಶ ಪತ್ರ ಸಹ ನೀಡಿದೆ. ಆದರೆ, ನಿರ್ದೇಶನಾಲಯ ಕರೆದಿರುವ ಈ ಟೆಂಡರ್‌ನಲ್ಲಿ ನಿರ್ದಿಷ್ಟ ಕಂಪನಿಗೆ ಟೆಂಡರ್ ಸಿಗುವಂತೆ ಅನುಕೂಲ ಮಾಡಿಕೊಡಲು ಹಾಗೂ ಹಗರಣ ಯಾರಿಗೂ ತಿಳಿಯದಂತೆ ಜೆಮ್ ಪೋರ್ಟಲ್ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ನಿರ್ದಿಷ್ಟ ಕಂಪನಿಗೆ ಕಾರ್ಯಾದೇಶ ಪತ್ರ ನೀಡಲು ನಿರ್ದೇಶನಲಾಯದ ಸಿಇಒ ಶಿವಾನಂದ್ ಬಸವರಾಜ್ ಕರಾಳೆ ಕೋಟ್ಯಂತರ ರೂ.ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಕೆಟಿಟಿಪಿ ಪ್ರಕಾರ ಇ-ಪೋರ್ಟಲ್ನಲ್ಲಿ ಟೆಂಡರ್ ಕರೆಯಬೇಕು, ಟೆಂಡರ್‌ಗೆ ಬಿಡ್ ಸಲ್ಲಿಕೆ, ತಾಂತ್ರಿಕ ಮತ್ತು ಫೈನಾನ್ಸಿಯಲ್ ಬಿಡ್ ಪ್ರಕ್ರಿಯೆ ಮುಗಿಯಲು 2 ತಿಂಗಳು ಬೇಕಾಗುತ್ತದೆ. ಇ-ಪೋರ್ಟಲ್ನಲ್ಲಿ ಕರೆಯುವ ಟೆಂಡರ್‌ನಲ್ಲಿ ಯಾವ್ಯಾವ ಕಂಪನಿಗಳು ಬಿಡ್ ಸಲ್ಲಿಸಿರುವುದು, ಏನೇನು ದಾಖಲೆಗಳು ಸಲ್ಲಿಕೆಯಾಗಿರುವುದು, ದರ ನಮೂದಿಸಿರುವುದೂ ಸೇರಿ ಇತರೆ ಅಂಶಗಳು ಎಲ್ಲ ಬಿಡ್ದಾರರಿಗೆ ತಿಳಿಯುತ್ತದೆ. ಅಂತಿಮವಾಗಿ ನಿಯಮದಂತೆ ಕಡಿಮೆ ಮೊತ್ತ ಬಿಡ್ ಮಾಡಿ ಎಲ್-1 ಪಡೆದ ಕಂಪನಿಗೆ ಕಾರ್ಯಾದೇಶ ಪತ್ರ ನೀಡಲಾಗುತ್ತದೆ.ದೊಡ್ಡ ಮೊತ್ತದ ಟೆಂಡರ್ ಆಗಿರುವುದರಿಂದ ಕನಿಷ್ಠ ಟೆಂಡರ್ ಪ್ರಕ್ರಿಯೆ ಮುಗಿಸಲು ಕನಿಷ್ಠ 2 ತಿಂಗಳು ಬೇಕಾಗುತ್ತದೆ.
ಆದರೆ, ಜೆಮ್ ಪೋರ್ಟಲ್ನಲ್ಲಿ ಟೆಂಡರ್ ಕರೆದರೆ ಯವ್ಯಾವ ಕಂಪನಿಗಳು ಬಿಡ್ ಸಲ್ಲಿಸಿವೆ ಮತ್ತು ಏನೇನು ದಾಖಲೆಗಳು ಸಲ್ಲಿಸಿವೆ ಸೇರಿ ಇತ್ಯಾದಿ ಮಾಹಿತಿಗಳು ದೊರೆಯಲ್ಲ. ಜೊತೆಗೆ, ನಕಲಿ ದಾಖಲೆ ಸಲ್ಲಿಸಿದ್ದರೂ ಗೊತ್ತಾಗುವುದಿಲ್ಲ. ಅವ್ಯವಹಾರ ನಡೆಸುವ ಉದ್ದೇಶದಿಂದ ಅಧಿಕಾರಿಗಳು ಬೇಕಂತಲ್ಲೇ ಜೆಮ್ ಪೋರ್ಟಲ್ನಲ್ಲಿ ಟೆಂಡರ್ ಆಹ್ವಾನಿಸಿ ತರಾತುರಿಯಲ್ಲಿ ಮುಗಿಸಲು ಪ್ರಯತ್ನ ನಡೆಯುತ್ತಿರುವ ಬಗ್ಗೆ ದೂರುಗಳಿವೆ.
ಸ್ಪೆಷಿಫಿಕೇಷನ್ ಕಾಪಿ ಪೇಸ್ಟ್
ಜೆಮ್ ಪೋರ್ಟಲ್ನಲ್ಲಿ ಕರೆದಿರುವ ಟೆಂಡರ್‌ನಲ್ಲಿ ನಿರ್ದಿಷ್ಟ ಕಂಪನಿಯ ಉಪಕರಣದ ಸ್ಪೆಷಿಫಿಕೇಷನ್ನನ್ನೇ ಅಧಿಕಾರಿಗಳು ಯಥಾವತ್ತಾಗಿ ಕಾಪಿ ಪೇಸ್ಟ್ ಮಾಡಲಾಗಿದೆ. ಎಂಎನ್‌ಸಿ ಕಂಪನಿಯ ಸ್ಪೆಷಿಫಿಕೇಷನ್ ಮತ್ತು ಟೆಂಡರ್‌ನಲ್ಲಿ ನಮೂದಿಸಿರುವ ಸ್ಪೆಷಿಫಿಕೇಷನ್ ಒಂದೇ ರೀತಿಯಲ್ಲಿದೆ. ಉತ್ತರ ಭಾರತದಲ್ಲಿ ಆ ಕಂಪನಿಯ ಸಲ್ಲಿಸಿದ್ದ ಟೆಂಡರ್‌ಗೆ ಪೂರೈಸಲು ಹಳೆಯ ಉಪಕರಣಗಳನ್ನು ದಾಸ್ತಾನು ಮಾಡಲಾಗಿತ್ತು. ಟೆಂಡರ್ ಸಿಗದ ಪರಿಣಾಮ ದಾಸ್ತಾನು ಮಾಡಿಕೊಂಡಿದ್ದ ಈ ಉಪಕರಣಗಳ ವಿಲೇವಾರಿಗೆ ಕಂಪನಿ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ರೋಗಿಗಳಿಗೆ ವೇಗವಾಗಿ ಗುಣಮಟ್ಟ ಸೇವೆ ನೀಡುವುದಕ್ಕಾಗಿ ನಿರ್ದೇಶನಾಲಯ ಹಿಂದೆಯೇ ಅಡ್ವಾನ್ಸ್ಡ್ ಉಪಕರಣ ಖರೀದಿಸಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಿತ್ತು ಅದರಂತೆ, ಹೊಸ ತಂತ್ರಜ್ಞಾನದ ಉಪಕರಣ ಖರೀದಿಸಿಬೇಕಿತ್ತು. ಹೊಸ ಉಪಕರಣದಲ್ಲಿ ಬರೀ ಅರ್ಧ ಗಂಟೆಯಲ್ಲೇ ಎಂಆರ್ಐ ಸ್ಕ್ಯಾನ್ ಮಾಡಿದರೆ ಎಲ್ಲ ಕಾಯಿಲೆ ಪತ್ತೆಯಾಗುತ್ತದೆ. ಆದರೆ, ನಿರ್ದೇಶನಾಲಯದ ಅಧಿಕಾರಿಗಳು ಕಂಪನಿಗೆ ಹಳೆಯ ಸ್ಟಾಕ್ ಕ್ಲೀಯರ್ ಮಾಡುವ ಉದ್ದೇಶದಿಂದ ಹಳೆಯ ಕಾಲದ ಎಂಆರ್ಐ ಉಪಕರಣ ಖರೀದಿಸಲು ಮುಂದಾಗಿದೆ. ಈ ಉಪಕರಣದಲ್ಲಿ ಬರೊಬ್ಬರಿ 1 ಗಂಟೆ ಕಾಲ ಎಂಆರ್ಐ ಉಪಕರಣದಲ್ಲಿ ಮಲಗಬೇಕಾಗುತ್ತದೆ. ಇದರಿಂದ ಬೇರೆ ರೀತಿಯ ತೊಂದರೆಯೂ ಉಂಟಾಗಲಿದೆ. ಒಟ್ಟಿನಲ್ಲಿ ಅಧಿಕಾರಿಗಳ ಲೋಪದಿಂದಾಗಿ ರೋಗಿಗಳನ್ನು ಬಲಿಪಶು ಮಾಡಲಾಗುತ್ತಿದೆ.
ಕಿಕ್ಬ್ಯಾಕ್ ಆರೋಪ
ನಿರ್ದಿಷ್ಟ ಕಂಪನಿಗೆ ಟೆಂಡರ್ ಸಿಗುವಂತೆ ಮಾಡುವ ಸಲುವಾಗಿ ನಿರ್ದೇಶನಲಾಯದ ಸಿಇಒ ಶಿವಾನಂದ್ ಬಸವರಾಜ್ ಕರಾಳೆ ಸೇರಿ ಇತರೆ ವಿಭಾಗದ ಅಧಿಕಾರಿಗಳು ಕೋಟ್ಯಂತರ ರೂ.ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಸರ್ಕಾರದ ಹಗರಣಗಳ ಬಗ್ಗೆ ನಿವೃತ್ತ ನ್ಯಾಯಾಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ನಿರ್ದೇಶನಾಲಯದಲ್ಲಿ ಎಂಆರ್ಐ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆಯುತ್ತಿರುವುದು ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿದೆ.
ಸಿಎಂ ಸಿದ್ಧರಾಮಯ್ಯ, ಸಚಿವ ಶರಣಪ್ರಕಾಶ್ ಪಾಟೀಲ್ ಗೂ ದೂರು
ಈ ಹಗರಣ ಸಂಬಂಧ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಬಿ.ಹೆಚ್ ವಿರೇಶ ಎಂಬುವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.
ವೀರೇಶ ಸಲ್ಲಿಸಿರುವಂತ ದೂರಿನಲ್ಲಿ ಎಂ ಆರ್ ಐ ಉಪಕರಣ ಖರೀದಿಯಲ್ಲಿ ಬೃಹತ್ ಹಗರಣ ನಡೆದಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ 90 ಕೋಟಿ ಮೌಲ್ಯದ ಟೆಂಡರ್ ನಿರ್ದಿಷ್ಟ ಕಂಪನಿಗೆ ಕೊಡಿಸಲು ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿ ಬಂದಿದೆ. ಇ-ಪೋರ್ಟಲ್ ಬದಲು ಜೆಮ್ ಪೋರ್ಟಲ್ ನಲ್ಲಿ ಟೆಂಡರ್ ಆಹ್ವಾನ ಮಾಡಲಾಗಿದೆ. ಈ ಕುರಿತಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಶಿಕ್ಷಣ ನಿರ್ದೇಶನದಾಲಯದ ಎಂ ಆರ್ ಐ ಉಪಕರಣ ಖರೀದಿ ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಮನವಿಗೆ ಸಿಎಂ ಸಿದ್ಧರಾಮಯ್ಯ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಿದರೇ, ತಪ್ಪಿತಸ್ಥ ಅಧಿಕಾರಿಗಳ ತಲೆದಂಡ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಆ ಬಗ್ಗೆ ಯಾವ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ, ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಹೊರ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.