ಬೆಂಗಳೂರು: ಹಸಿದ ಮನೆಯಲ್ಲಿರುವವರಿಗೆ ಶಕ್ತಿ ನೀಡಿದ್ದು ಸಂವಿಧಾನ. ನಾವ್ಯಾರೂ ಇದೇ ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಬೇಕೆಂದು ಹುಟ್ಟಿಲ್ಲ. ಸತ್ತರೆ ಇತಿಹಾಸ, ಜಯಿಸಿದರೆ ಶಕ್ತಿ ಎಂದು ಅಂಬೇಡ್ಕರರು ನಂಬಿದ್ದರು. ನಾನು ಪ್ರತಿದಿನ ಅಂಬೇಡ್ಕರರನ್ನ ಸ್ಮರಿಸಿಯೇ ನನ್ನ ಕಾರ್ಯಗಳನ್ನ ಆರಂಭಿಸುತ್ತೇನೆ, ಅವರು ನನ್ನ ಜೀವನದ ಆದರ್ಶ ಎಂಬುದಾಗಿಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯರ ಬದುಕಿಗೆ ರೂಪ ಕೊಟ್ಟಿದ್ದು ಅಂಬೇಡ್ಕರ್. ವಿಶ್ವದ ಎಲ್ಲೆಡೆ ನಮ್ಮ ಭಾರತದ ಸಂವಿಧಾನವನ್ನ ಮೆಚ್ಚಿಕೊಳ್ಳುತ್ತಾರೆ ಎಂದರೆ ಅದಕ್ಕೆ ಅಂಬೇಡ್ಕರರು ಕಾರಣ. ಎಲ್ಲ ಧರ್ಮ ಗ್ರಂಥಗಳೂ ಎಲ್ಲರ ರಕ್ಷಣೆಯೇ ಮುಖ್ಯವೆಂದಿದೆ, ಅದನ್ನೇ ಸಂವಿಧಾನವೂ ಹೇಳಿದೆ ಎಂದರು.
ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಅಲ್ಲ, ಭಾರತದ ಪ್ರತಿ ಪ್ರಜೆಗೂ ದೇವರ ಸ್ವರೂಪ. ಭಾರತದ ಸಂವಿಧಾನವನ್ನು ಅರ್ಪಿಸಿಕೊಂಡ ಸಂಸತ್ ನಲ್ಲಿ ಅಂಬೇಡ್ಕರ್ ಅವರಿಗೆ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಅವಮಾನವಾಗಿದೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಂವಿಧಾನದ ರಕ್ಷಣೆಗಾಗಿ ಪ್ರತಿಜ್ಞೆ ಮಾಡಿ ಮುನ್ನುಡಿ ಬರೆದ ಕಾರ್ಯಕ್ರಮ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಎಂಬುದಾಗಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬೆಲೆ ಏರಿಕೆ ನಿಯಂತ್ರಣ ಮಾಡಲಾಗಿಲ್ಲ ಎಂದು, ಅದರ ವಿರುದ್ಧ ಬಡವರನ್ನು ರಕ್ಷಿಸಲೆಂದು 52 ಸಾವಿರ ಕೋಟಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದೆವು. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಜನಾಕ್ರೋಶ ಯಾತ್ರೆ ಮಾಡಬೇಕಿತ್ತು ಎಂದರು.
ಏಪ್ರಿಲ್ 17ರಂದು ಫ್ರೀಡಂ ಪಾರ್ಕಿನಲ್ಲಿ ಕೇಂದ್ರದ ಬೆಲೆ ಏರಿಕೆ ಕ್ರಮದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಈ ಹೋರಾಟಕ್ಕೆ ಪ್ರೇರಣೆ. ಹೋರಾಟದ ಮೂಲಕವೇ ನಾವು ಜಯ ಸಾಧಿಸಬೇಕು ಎಂದು ಅಂಬೇಡ್ಕರರು ಹೇಳಿದ್ದರು ಎಂಬುದಾಗಿ ತಿಳಿಸಿದರು.
ಚಿತ್ರದುರ್ಗ: ಏ.15ರ ನಾಳೆ ಹಿರಿಯೂರು ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಗಮನಿಸಿ : ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಮಾಹಿತಿ