ಬೆಂಗಳೂರು : ವಿಶ್ವ ಬ್ಯಾಂಕ್ ಸಾಲದ ವಿಚಾರವಾಗಿ 2000 ಕೋಟಿ ರೂಪಾಯಿ ಹಗರಣ ನಡೆದಿದೆ. ರಾಜ ಕಾಲುವೆ ನಿರ್ಮಾಣದಲ್ಲಿ ಸುಮಾರು 2000 ಕೋಟಿ ರೂಪಾಯಿ ಹಗರಣ ಆಗಿದೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಇಂದು ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ವಿಶ್ವಬ್ಯಾಂಕ್ ಸಾಲದ ವಿಚಾರದಲ್ಲಿ 2000 ಕೋಟಿ ರೂಪಾಯಿ ಹಗರಣ ಆಗಿದೆ ಎಂದು ರಾಜ್ಯಪಾಲರಿಗೆ ಶಾಸಕ ಮುನಿರತ್ನ ದೂರು ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಹಗರಣದ ಬಗ್ಗೆ ಇಡಿಗೆ ದೂರು ನೀಡಿದೆ. ಅದಾದ ಬಳಿಕ ಅಧಿಕಾರಿಗಳನ್ನು ಗುತ್ತಿಗೆದಾರರನ್ನು ಮನೆಗೆ ಕರೆಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸಭೆ ನಡೆಸಿದ್ದಾರೆ.ರಾಜ ಕಾಲುವೆ ನಿರ್ಮಾಣದಲ್ಲಿ ಬಹುಕೋಟಿ ಹಗರಣ ಆಗಿದೆ.
ಸ್ಟಾರ್ ಚಂದ್ರುಗೆ ಮಹದೇವಪುರ ಕ್ಷೇತ್ರದಲ್ಲಿ ಟೆಂಡರ್ ನೀಡಲಾಗಿದೆ. ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ, ಯಲಹಂಕದಲ್ಲಿ ಎಲ್ಲಯ್ಯ ಕನ್ಸ್ಟ್ರಕ್ಷನ್ ಕಂಪನಿ ಗೆ ಟೆಂಡರ್ ಕೊಡುತ್ತಾರೆ ಅದೇ ರೀತಿ ರಾಜರಾಜೇಶ್ವರಿ ನಗರದಲ್ಲೂ ಗುತ್ತಿಗೆ ನೀಡಿದ್ದಾರೆ. ಹಾಸನದ ಕಾಮಗಾರಿಗಳನ್ನು ಆಂಧ್ರದ ಬಿಎಸ್ಆರ್ ಕಂಪನಿಗೆ ಟೆಂಡರ್ ನೀಡಿದ್ದಾರೆ. ಏಪ್ರಿಲ್ 15ರಂದು ಈ ಎಲ್ಲಾ ಕಂಪನಿಗಳಿಗೂ ಟೆಂಡರ್ ಕರೆದಿದ್ದಾರೆ ಎಂದು ಅವರು ತಿಳಿಸಿದರು.
ಗುತ್ತಿಗೆದಾರರ ಕಂಪನಿಗಳಿಗೆ ಅನುಕೂಲವಾಗುವಂತೆ ಟೆಂಡರ್ ನಿಯಮ ಬದಲು ಮಾಡಲಾಗಿದೆ. ಗುತ್ತಿಗೆದಾರರ ಜೊತೆಗೆ ಶಾಮಿಲಾಗಿ 2000 ಕೋಟಿ ಅಕ್ರಮ ಮಾಡುತ್ತಿದ್ದಾರೆ. ವಿಶ್ವ ಬ್ಯಾಂಕ್ ಸಾಲದ ವಿಚಾರವಾಗಿ 400 ಕೋಟಿ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂದು ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಗಂಭೀರವಾಗಿ ಆರೋಪಿಸಿದರು.