ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿಸಿದ್ದು ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಹುಬ್ಬಳ್ಳಿಯ ಆನಂದನಗರದ ಹೊರವಲಯದಲ್ಲಿ ನಡೆದಿದೆ.
ಹೌದು ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಮಲಿಕ್ ಆದೋನಿ ಕಾಲಿಗೆ ಫೈರಿಂಗ್ ಮಾಡಿದ್ದು, ಹುಬ್ಬಳ್ಳಿಯ ಆನಂದ ನಗರದ ಹೊರವಲಯದಲ್ಲಿ ಪೊಲೀಸರು ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹಳೆ ಹುಬ್ಬಳ್ಳಿ ಠಾಣೆಯ ಪಿಎಸ್ಐ ವಿಶ್ವನಾಥ್ ಅವರು ರೌಡಿಶೀಟರ್ ಮಲಿಕ್ ಆದೋನಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ನಿನ್ನೆ ಹಣಕಾಸಿನ ವಿಚಾರವಾಗಿ ಗಲಾಟೆ ಆಗಿತ್ತು. ವಿಚಾರಣೆಯ ವೇಳೆ ಪೊಲೀಸರ ಮೇಲೆ ಮಲಿಕ್ ಆಧೋನಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಪಿಎಸ್ಐ ವಿಶ್ವನಾಥ್ ಮಲಿಕ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪಿಎಸ್ಐ ವಿಶ್ವನಾಥ್, ಪಿಸಿಗಳಾದ ಕಲ್ಲನಗೌಡ, ಶರೀಫ್ ಎನ್ನುವವರಿಗೆ ಗಾಯಗಳಾಗಿವೆ. ಗಾಯಾಳು ಪೊಲೀಸರು ಮತ್ತು ಆರೋಪಿ ಮಲಿಕ್ ಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.