ರಾಯಚೂರು : ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಪರೀಕ್ಷಾ ಮೇಲ್ವಿಚಾರಕ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ತಾಲೂಕಿನ ಸಿಂಗನೋಡಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆ ವೇಳೆ ಅಭ್ಯರ್ಥಿಗಳ ಬದಲಿಗೆ ಬೇರೆಯವರಿಂದ ಪರೀಕ್ಷೆ ಬರೆಯಿಸಿರುವ ಆರೋಪ ಕೇಳಿ ಬಂದಿದೆ. ಇಬ್ಬರು ವಿದ್ಯಾರ್ಥಿಗಳ ಜಾಗದಲ್ಲಿ ಬೇರೆ ಇಬ್ಬರಿಂದ ಪರೀಕ್ಷೆ ಬರೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಿಂದಿ ಪರೀಕ್ಷೆ ವೇಳೆ ಈ ಅಕ್ರಮ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪರೀಕ್ಷಾ ಮೇಲ್ವಿಚಾರಕ ಹಾಗೂ ನಾಲ್ಕು ವಿದ್ಯಾರ್ಥಿಗಳ ವಿರುದ್ದ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೀಗೊಂದು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲಿಸಿದಾಗ, ಬೇರೆ ಅಭ್ಯರ್ಥಿ ಪರೀಕ್ಷೆಗೆ ಕುಳಿತಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.