ಬೆಂಗಳೂರು: ‘ರಾಜ್ಯದಲ್ಲಿ ಇಂಥ ಪೊಲೀಸ್ ಬೇಜವಾಬ್ದಾರಿಯನ್ನು ನಾವು ಯಾವತ್ತೂ ಕಂಡಿಲ್ಲ’ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
‘ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ ಇವರಿಬ್ಬರ ಹೆಸರನ್ನು ಎಫ್‍ಐಆರ್‍ನಲ್ಲಿ ಸೇರಿಸಬೇಕು’ ಎಂದು ಆಗ್ರಹಿಸಿದರು. ಇದರ ಹಿಂದೆ ಇರುವರೆನ್ನಲಾದ ಕೊಡಗಿನ ಎಸ್ಪಿಯನ್ನು ಸಸ್ಪೆಂಡ್ ಮಾಡಿ ಎಂದು ಒತ್ತಾಯಿಸಿದರು.
ಮಾಧ್ಯಮಗಳ ಜೊತೆ ಇಂದು ಸಂಜೆ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳೇ ನಮ್ಮ ಕಾರ್ಯಕರ್ತರನ್ನು ಈ ರೀತಿ ಮಾಡುವುದಾದರೆ ನಾವು ನಮ್ಮ ತೀರ್ಮಾನ ಮಾಡಬೇಕಾಗುತ್ತದೆ. ನಾವೂ ಅಧಿಕಾರ ನೋಡಿದ್ದೇವೆ. ಈ ಅಧಿಕಾರ ಕೊಟ್ಟವರು ಅದನ್ನು ಕಿತ್ತುಕೊಳ್ಳುವ ಕಾಲ ಬರುತ್ತದೆ’ ಎಂದು ಎಚ್ಚರಿಸಿದರು. ‘ದೂರಿನಲ್ಲಿ ಇರುವ ಇತರ ಹೆಸರುಗಳನ್ನು ಸೇರಿಸದಿದ್ದರೆ ಶವ ಮೇಲೆತ್ತಲು ಬಿಡುವುದಿಲ್ಲ’ ಎಂದು ತಿಳಿಸಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ಆಸ್ಪತ್ರೆಗೆ ಬರಲಿದ್ದಾರೆ ಎಂದು ಪ್ರಕಟಿಸಿದರು.
‘ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಸಾವಿಗೆ ಕಾರಣವನ್ನು ಅವರು ಡೆತ್ ನೋಟಿನಲ್ಲಿ ಬರೆದಿದ್ದಾರೆ. ನಾವು ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ. ವಿಪಕ್ಷ ನಾಯಕ ಆರ್.ಅಶೋಕ್ ಬಂದಿದ್ದರು. ದೂರಿನಲ್ಲಿ ಕೊಟ್ಟ ಹೆಸರುಗಳನ್ನು ಎಫ್‍ಐಆರ್‍ನಲ್ಲಿ ಸೇರಿಸಿದ್ದೀರಾ ಎಂದು ಕೇಳಿದ್ದೇವೆ. ನಾವೆಲ್ಲ ಸೇರಿಸಿದ್ದೇವೆ; ವರಿ ಮಾಡಬೇಕಿಲ್ಲ ಎಂದು ಡಿಸಿಪಿ ಮತ್ತಿತರ ಅಧಿಕಾರಿಗಳು ಹೇಳಿದ್ದಾರೆ’ ಎಂದು ವಿವರಿಸಿದರು.
‘ಈಗ ನೋಡಿದರೆ ತನ್ನೀರ್ ಮೈನಾ ಮುಂತಾದವರು ಎಂದಿದೆ’ ಎಂದು ಆಕ್ಷೇಪಿಸಿದರು. ‘ವಿಪಕ್ಷ ನಾಯಕರೆಂದರೆ ಡಿಫ್ಯಾಕ್ಟೊ ಚೀಫ್ ಮಿನಿಸ್ಟರ್ ಎನ್ನುತ್ತಾರೆ. ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿದ್ದಾಗ ಕೊಡಗಿನಲ್ಲಿ ಮೊಟ್ಟೆ ಬಿಸಾಡಿದ್ದರಂತೆ. ಆಗ ಡಿಫ್ಯಾಕ್ಟೊ ಚೀಫ್ ಮಿನಿಸ್ಟರ್ ಎಂದಿದ್ದೀರಲ್ಲ ಸಿದ್ದರಾಮಯ್ಯನವರೇ? ಈಗ ನಾವೇನು?’ ಎಂದು ಕೇಳಿದರು. ಪೊಲೀಸ್ ಬೇಜವಾಬ್ದಾರಿಯನ್ನು ಖಂಡಿಸಿದರು. ಕಾರ್ಯಕರ್ತರಿಗೆ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯೇ?: ಡಾ.ಅಶ್ವತ್ಥನಾರಾಯಣ್
ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಮಾತನಾಡಿ, ‘ವಿನಯ್ ಅವರ ಸಾವಿಗೆ ಕಿರುಕುಳವೇ ಕಾರಣ ಎಂದು ಡೆತ್ ನೋಟಿನಲ್ಲಿ ತಿಳಿಸಿದ್ದಾರೆ. ಅವರು ಮಾಡಿದ ತಪ್ಪಾದರೂ ಏನು?’ ಎಂದು ಕೇಳಿದರು. ‘ಶಾಸಕ- ಅವರ ಹಿಂಬಾಲಕನ ಕಿರುಕುಳವನ್ನು ಇದರಲ್ಲಿ ತಿಳಿಸಿದ್ದಾರೆ’ ಎಂದರು.
‘ಡೆತ್ ನೋಟ್ ಪ್ರಕಾರ ಎಫ್‍ಐಆರ್‍ನಲ್ಲಿ ಹೆಸರು ಸೇರಿಸುವುದು ಸಾಮಾನ್ಯ ಪ್ರಜ್ಞೆ’ ಎಂದ ಅವರು, ‘ಈಗಲೇ ಕ್ಲೀನ್ ಚಿಟ್ ಕೊಡುತ್ತಿದ್ದಾರೆ’ ಎಂದು ಆಕ್ಷೇಪಿಸಿದರು. ‘ಇದು ಕಾಂಟ್ರಾಕ್ಟ್ ಸರಕಾರ’ ಎಂದು ಟೀಕಿಸಿದರು. ‘ಸರಕಾರ ಎಂದರೆ ಕಾಂಗ್ರೆಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯೇ? ಸಿದ್ದರಾಮಯ್ಯ ಪ್ರೈವೇಟ್ ಲಿಮಿಟೆಡ್ ಕಂಪೆನಿಯೇ?’ ಪರಮೇಶ್ವರ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯೇ?’ ಎಂದು ಪ್ರಶ್ನಿಸಿದರು.
ವಿನಯ್ ಸೋಮಯ್ಯ ರವರ ಸೋದರ ಜೀವನ್ ಅವರು ಮಾತನಾಡಿ, ದೂರಿನಲ್ಲಿ ನಾಲ್ಕು ಜನರ ಹೆಸರು ಉಲ್ಲೇಖಿಸಿದ್ದರೂ ಎಫ್‍ಐಆರ್‍ನಲ್ಲಿ ಒಬ್ಬರ ಹೆಸರನ್ನಷ್ಟೇ ಹಾಕಿದ್ದಾರೆ. ನಮಗೆ ನ್ಯಾಯ ಸಿಗಬೇಕು ಎಂದು ತಿಳಿಸಿದರು.
BREAKING: ಏ.6ರಂದು ಶ್ರೀರಾಮ ನವಮಿ ಹಬ್ಬ ಹಿನ್ನಲೆ: ಬೆಂಗಳೂರಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ
ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ ನೀಡಿದ್ದ ಸಮನ್ಸ್ ರದ್ದತಿಗೆ ಕೋರ್ಟ್ ನಕಾರ