ಬೆಂಗಳೂರು : ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ, ತುಟ್ಟಿಭತ್ಯೆ ಹೆಚ್ಚಳ ಮಾಡುವಂತೆ ಇದೀಗ ರಾಜ್ಯ ಸರ್ಕಾರಿ ನೌಕರರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್.ಷಡಕ್ಷರಿ ಅವರು ಆರ್ಥಿಕ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಅಖಿಲ ಭಾರತ ಬೆಲೆ ಸೂಚ್ಯಂಕ ಆಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ಕರ್ನಾಟಕ ರಾಜ್ಯ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಈ ಹಿಂದಿನಿಂದಲೂ ಮಂಜೂರು ಮಾಡಿರುತ್ತದೆ.
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಜ.1, 2025ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ. 2ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿರುತ್ತದೆ. ಅದರಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜ.1,2025 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ.2 ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಬೇಕು ಎಂದು ಷಡಕ್ಷರಿ ಕೋರಿದ್ದಾರೆ.