ಹಾವೇರಿ : ಕಳೆದ ಕೆಲವು ದಿನಗಳ ಹಿಂದೆ ಕೊಪ್ಪಳದಲ್ಲಿ ತಾಯಿ ಸಾವನಪ್ಪಿದ್ದರೂ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಒಬ್ಬ ತಾಯಿಯ ಸಾವಿನ ನೋವಲ್ಲು ಪರೀಕ್ಷೆ ಬರೆದಿದ್ದ ಘಟನೆ ನಡೆದಿತ್ತು. ಇದೀಗ ಹಾವೇರಿಯಲ್ಲೂ ಕೂಡ ಅಂತಹದ್ದೇ ಘಟನೆ ನಡೆದಿದ್ದು, ತಂದೆಯ ಸಾವಿನ ನೋವಿನಲ್ಲೂ ಕೂಡ ಅಣ್ಣ ಮತ್ತು ತಂಗಿ ಇಬ್ಬರು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿರುವ ಘಟನೆ ವರದಿಯಾಗಿದೆ.
ಹೌದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಪದ್ಮಾವತಿಪುರ ತಾಂಡಾ ನಿವಾಸಿಗಳಾಗಿರುವ ರಕ್ಷಿತಾ ಹನುಮಂತಪ್ಪ ಲಮಾಣಿ ಮತ್ತು ಧನರಾಜ ಹನುಮಂತಪ್ಪ ಲಮಾಣಿ ರಾಣೇಬೆನ್ನೂರು ನಗರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ.
ಇಂದು ಎಸ್‌ಎಸ್‌ಎಲ್‌ಸಿಯ ಕೊನೆಯ ಪರೀಕ್ಷೆ ಇತ್ತು. ಬೆಳಗ್ಗೆ ತಂದೆ ಹನುಮಂತಪ್ಪ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮನೆಯಲ್ಲಿ ತಂದೆ ಮೃತಪಟ್ಟಿದ್ದರೂ ಸಹ ನಗರದ ಪರೀಕ್ಷೆ ಕೇಂದ್ರಕ್ಕೆ ತೆರಳಿ ಕೊನೆಯ ಹಿಂದಿ ಪರೀಕ್ಷೆ ಬರೆದಿದ್ದಾರೆ.