ಕೊಪ್ಪಳ : ಇತ್ತೀಚೆಗೆ ಬೆಂಗಳೂರಿನಲ್ಲಿ ನೀರು ಹಿಡಿಯಲು ಹೋದ ಮಹಿಳೆಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಕೊಪ್ಪಳದಲ್ಲಿ ಕೂಡ ಅಂತದ್ದೆ ಘಟನೆ ನಡೆದಿದ್ದು, ಶಾಲೆಗೆ ಹೊರಟಿದ್ದ ವೇಳೆ ವಿದ್ಯುತ್ ತಂತಿ ಮೈಮೇಲೆ ಬಿದ್ದು ಸ್ಥಳದಲ್ಲೇ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿದೆ.
ಮೃತ ಶಿಕ್ಷಕಿಯನ್ನು ಜಂಗಮರ ಕಲ್ಗುಡಿ ಗ್ರಾಮದ ಹೊಸಕೇರಿಯ ಹರಿತಾ ಶ್ರೀನಿವಾಸ (26) ಎಂದು ಗುರುತಿಸಲಾಗಿದೆ. ಶಾಲೆಯ ವಾಹನ ದಿನನಿತ್ಯ ಗ್ರಾಮಕ್ಕೆ ಬಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿತ್ತು. ಎಂದಿನಂತೆ ಶಾಲೆಗೆ ಹೋಗಲು ತಮ್ಮ ಮನೆಯಿಂದ ಬೈಕ್‌ನಲ್ಲಿ ಶಿಕ್ಷಕಿ ಹರಿತಾ ಬಂದಿದ್ದಾರೆ.
ಆದರೆ, ರಾತ್ರಿ ಇಡೀ ಸುರಿದ ಮಳೆಯಿಂದಾಗಿ ವಿದ್ಯುತ್ ತಂತಿ ಶಿಕ್ಷಕಿಯ ಮೇಲೆ ಬಿದ್ದಿದ್ದು, ಶಿಕ್ಷಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಶಿಕ್ಷಕಿ ವಿದ್ಯಾನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.