ಬೆಂಗಳೂರು : ಸಾಹಿತಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕರು, ಬಿಎಂಶ್ರೀ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಡಾ.ಪಿ.ವಿ.ನಾರಾಯಣ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಚನ ಸಾಹಿತ್ಯದ ಅಧ್ಯಯನ ಸೇರಿದಂತೆ ವಿಮರ್ಶೆ, ಸಂಶೋದನಾ ಕೃತಿಗಳು, ಹಲವಾರು ಕಾದಂಬರಿಗಳ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅಪೂರ್ವ ವ್ಯಕ್ತಿ ಹಾಗೂ ಶಕ್ತಿ ಪಿ.ವಿ.ನಾಋಾಯಣ ಅವರು. ಕನ್ನಡದ ಸ್ಥಾನಮಾನಗಳಿಗಾಗಿ ನಡೆಯುತ್ತಿದ್ದ ಹೋರಾಟಗಳಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಚಿಂತನೆಗಳನ್ನು ತಿಳಿಸುತ್ತಿದ್ದರು ಎಂದು ಇವರನ್ನು ಬಲ್ಲವರಿಂದ ಕೇಳಿ ತಿಳಿದಿದ್ದೇನೆ. ಗೋಕಾಕ್ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದು ಹಲವರಿಗೆ ಮಾರ್ಗದರ್ಶನ ಮಾಡಿದವರು.
30 ವರ್ಷಗಳಿಗೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ಮನಸೂರೆಗೊಂಡ ಇವರ ನಿಧನದಿಂದ ಕನ್ನಡ ಸಾಹಿತ್ಯ, ವಿಮರ್ಶೆ, ಸಂಶೋದನಾ ಕ್ಷೇತ್ರಕ್ಕೆ ಹಿನ್ನಡೆಯಾದಂತಾಗಿದೆ. ಹಿರಿಯರಾದ ನಾರಾಯಣ ಅವರು ಸುಮಾರು 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಅನುವಾದಗಳ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡದ ತೇರನ್ನು ಎಳೆಯಲು ಇಂತಹ ಹಿರಿಯರ ಮಾರ್ಗದರ್ಶನ ಅತ್ಯಗತ್ಯವಿದ್ದ ಕಾಲದಲ್ಲಿ ನಿಧನರಾಗಿದ್ದು ನೋವಿನ ಸಂಗತಿ.
ಕನ್ನಡ ಸಾಹಿತ್ಯ, ಹೋರಾಟ ಲೋಕದ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಿದೆ. ಶಿಷ್ಯ ವರ್ಗ, ಕುಟುಂಬ ವರ್ಗ, ಸಾಹಿತ್ಯ ಪ್ರಿಯರಿಗೆ ಇವರ ನಿಧನದ ನೋವು ಭರಿಸುವ ಶಕ್ತಿಯನ್ನು ಆ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.