ಬೆಳಗಾವಿ : ಬೆಳಗಾವಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ರಜೆ ಕೊಡದಿದ್ದಕ್ಕೆ ಮನನೊಂದ ಕೆಎಸ್ಆರ್ಟಿಸಿ ಚಾಲಕನೊಬ್ಬ ಬಸ್ ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಇಲ್ಲಿನ ಹಳೆ ಗಾಂಧಿನಗರದ ನಿವಾಸಿ ಬಾಲಚಂದ್ರ ಶಿವಪ್ಪ ಹುಕ್ಕೋಜಿ (47) ಸಾವಿಗೆ ಶರಣಾದವರು. ಶಹಾಪುರ ನಾಕಾದಿಂದ ವಡಗಾವಿಗೆ ಸಂಚರಿಸುವ ಬಸ್ಸಿನಲ್ಲಿ ಅವರು ಚಾಲಕರಾಗಿದ್ದರು.
ಮನೆಯಲ್ಲಿ ಬಾಲಚಂದ್ರ ಅವರ ಅಕ್ಕನ ಮಗಳ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಕೆಲ ದಿನ ರಜೆ ಕೊಡುವಂತೆ ಡಿಪೊ ಮ್ಯಾನೇಜರ್ ಬಳಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ರಜೆ ಕೊಡದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.