ಬೆಂಗಳೂರು : ರಾಜ್ಯದಲ್ಲಿ ನಿನ್ನೆಯಿಂದ ದುಬಾರಿ ದುನಿಯಾ ಆರಂಭವಾಗಿದ್ದು, ಹಾಲಿನ ದರ ವಿದ್ಯುತ್ ದರ ಏರಿಕೆಯಾಗಿದೆ. ಅಲ್ಲದೇ ಬೆಂಗಳೂರಲ್ಲಿ ಕಸಕ್ಕೂ ಸೆಸ್ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ 2025-26ನೇ ಸಾಲಿನ ಆರ್ಥಿಕ ವರ್ಷ ನಿನ್ನೆಯಿಂದ ಆರಂಭಗೊಂಡಿದ್ದರೂ ಆಸ್ತಿ ತೆರಿಗೆ ಪಾವತಿಗೆ ಬಿಬಿಎಂಪಿ ವೆಬ್ ಸೈಟ್ ಸಿದ್ಧವಾಗದ ಕಾರಣ ಇನ್ನೂ ಎರಡೂರು ದಿನ ಆಸ್ತಿ ಮಾಲೀಕರು ತೆರಿಗೆ ಪಾವತಿ ಸಾಧ್ಯವಾಗುವುದಿಲ್ಲ.
ಆಸ್ತಿ ತೆರಿಗೆ ಪಾವತಿ ಪೋರ್ಟಲನ್ನು ಎನ್‌ಐಸಿ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುತ್ತಿದೆ. ಪ್ರಸಕ್ತ ಸಾಲಿನಿಂದ ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಘನತ್ಯಾಜ್ಯ ಶುಲ್ಕ ವಿಧಿಸಿ ಆಸ್ತಿ ತೆರಿಗೆಯೊಂದಿಗೆ ವಸೂಲಿಗೆ ತೀರ್ಮಾನಿಸಲಾಗಿದೆ. ಜತೆಗೆ, ಸುಸ್ತಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆಯ ಶೇ.100ರಷ್ಟು ದಂಡ ವಿಧಿ ಸುವುದು, ಬಡ್ಡಿ ವಿಧಿಸುವುದಕ್ಕೆ ಸಂಬಂಧಿಸಿ ದಂತೆ ಆಸ್ತಿ ತೆರಿಗೆ ಪಾವತಿಸುವ ವೆಬ್ ಸಾಕಷ್ಟು ಬದಲಾಗಬೇಕಾಗಿದೆ. ಪೋರ್ಟಲ್ ಸಿದ್ದ ಪಡಿಸುವುದು ಬಾಕಿ ಇರುವ ಕಾರಣ 2-3 ದಿನ ತೆರಿಗೆ ಪಾವತಿ ತಡವಾಗಲಿದೆ ಎಂದಿದ್ದಾರೆ ಅಧಿಕಾರಿಗಳು.
ಶೇ.5ರಷ್ಟು ವಿನಾಯಿತಿ
ಪ್ರತಿ ವರ್ಷದಂತೆ ಏಪ್ರಿಲ್‌ನಲ್ಲಿ ಪ್ರಸಕ್ತ 2025-26ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ಆಸ್ತಿ ತೆರಿಗೆ ಮೊತ್ತದ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಏ.30ರ ತಡರಾತ್ರಿ 12ರ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡುವವರು ಈ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.