ಮಂಡ್ಯ : ಜೂಜಾಟಕ್ಕೆ ಸಕ್ಕರೆ ನಗರದಲ್ಲಿ ಬ್ರೇಕ್ ಬಿದ್ದಿದೆ. ಯುಗಾದಿ ಹಬ್ಬದಂದು ಜೂಜಾಟ ನಡೆಸಿದರೆ, ಕೇಸ್ ಬೀಳೋದು ಗ್ಯಾರಂಟಿ ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಹೊಸ ವರ್ಷದ ಆರಂಭ ಎನ್ನುವ ನಂಬಿಕೆ ಇರುವ ಯುಗಾದಿ ಹಬ್ಬ ಎಂದರೆ ಜನರಲ್ಲಿ ಸಡಗರ ಮನೆ ಮಾಡುತ್ತದೆ. ಹಬ್ಬದಂದು ಹೊಸ ಬಟ್ಟೆ ತೊಟ್ಟು, ಹಬ್ಬದೂಟ ಸವಿದು, ಪರಸ್ಪರ ಶುಭಾಶಯ ಕೋರುವುದರ ಜೊತೆಗೆ ಜೂಜಾಟ ಆಡುವ ಪದ್ಧತಿ ಕೂಡ ಗತಕಾಲದಿಂಲೂ ನಡೆದುಕೊಂಡು ಬಂದಿದೆ.
ಯುಗಾದಿ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಹಬ್ಬದ ಆಚರಣೆ ನೆಪದಲ್ಲಿ ಇಸ್ಪೀಟ್ ಆಟ, ಜೌಕಬಾರ ಸೇರಿದಂತೆ ನಾನಾ ಬಗೆಯ ಜೂಜಾಟದ ಕನವರಿಕೆಯಲ್ಲಿದ್ದ ಜನರಿಗೆ ಮಂಡ್ಯ ಜಿಲ್ಲಾ ಪೊಲೀಸರು ಜೂಜಾಟ ನಿರ್ಬಂಧಿಸಿ, ವಾರ್ನಿಂಗ್ ನೀಡಿದ್ದಾರೆ.
ಯುಗಾದಿ ಹಬ್ಬದ ಜೂಜಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಯುಗಾದಿ ಹಬ್ಬದಂದು ಎಲ್ಲಾ ಮಾದರಿಯ ಜೂಜಾಟಗಳನ್ನು ನಿಷೇಧಿಸಿದ್ದು, ಒಂದು ವೇಳೆ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ ಜೂಜಾಟಕ್ಕೆ ಮುಂದಾದವರು ಹಾಗೂ ಜೂಜು ಅಡ್ಡೆ ನಡೆಸುವವರ ಮೇಲೂ ಗೂಂಡಾ ಕಾಯ್ದೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಯುಗಾದಿ ಹಬ್ಬದ ಸಂದರ್ಭ ಹಾಗೂ ಇತರೇ ದಿನಗಳಲ್ಲಿ ಎಲ್ಲಿಯಾದರೂ ಜೂಜಾಟ ಆಡುವುದನ್ನು ಕಂಡರೂ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಎಸ್ಪಿ ಮನವಿ ಮಾಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
Watch Video: ‘ಮ್ಯಾನ್ಮಾರ್’ನಲ್ಲಿ ಭಾರೀ ಭೂಕಂಪನ: ಕ್ಷಣಾರ್ಧದಲ್ಲಿ ಗಗನಚುಂಬಿ ಕಟ್ಟಡ ನೆಲಸಮ | Myanmar Earthquake