ಬೆಂಗಳೂರು : ಸಾಮಾನ್ಯವಾಗಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಸರತಿ ಸಾರಿನಲ್ಲಿ ನಿಂತು ದೇವರ ಪ್ರಸಾದ ತೆಗೆದುಕೊಳ್ಳುತ್ತಿದ್ದರು. ಅಲ್ಲದೇ ಪ್ರಸಾದ ತೆಗೆದುಕೊಂಡು ತಮ್ಮ ಅಕ್ಕ ಪಕ್ಕದ ಮನೆಗೆ ಕೊಡೋದು ವಾಡಿಕೆ. ಆದರೆ ಇನ್ನು ಮುಂದೆ ಕರ್ನಾಟಕದ 14 ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರಿಗೆ ವಿತರಿಸುವ ಪ್ರಸಾದವು ನಿಮ್ಮ ಬಾಗಿಲಿಗೇ ಬರಲಿದೆ.
ಹೌದು ದೇಗುಲದಿಂದ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ, ಬಿಲ್ವಪತ್ರೆ, ಕುಂಕುಮ, ಹೂವಿನ ಪ್ರಸಾದವನ್ನು ಭಕ್ತರು ತರಿಸಿಕೊಳ್ಳಬಹುದು. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇಗುಲ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇಗುಲಗಳ ಪ್ರಸಾದ ಆನ್ಲೈನ್ ಮೂಲಕ ವಿತರಿಸುವ ‘ಇ-ಪ್ರಸಾದ ಕಾರ್ಯಕ್ರಮಕ್ಕೆ ಗುರುವಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಶಾಂತಿನಗರದ ಮುಖ್ಯ ಕಚೇರಿಯಲ್ಲಿ ಚಾಲನೆ ನೀಡಿದರು.
ಆನ್ಲೈನ್ನಲ್ಲಿ ಪ್ರಸಾದ ತರಿಸಿಕೊಳ್ಳುವುದು ಹೇಗೆ?
ಪ್ರಸಾದವನ್ನು ತರಿಸಿಕೊಳ್ಳಲು ಇಚ್ಛಿಸುವ ಭಕ್ತರು ಮುಜರಾಯಿ ಇಲಾಖೆಯ ಅಧಿಕೃತ ವೆಬ್ಸೈಟ್ csc.devalayas.com ಕ್ಲಿಕ್ ಮಾಡಿ. ಅಲ್ಲಿ ಬಲಭಾಗದಲ್ಲಿ ಮೇಲ್ಗಡೆ ಇರುವ ಲಾಗಿನ್ ವಿಥ್ ಡಿಜಿಟಲ್ ಸೇವಾ ಕನೆಕ್ಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಯೂಸರ್ನೇಮ್ ಅಥವಾ ಇ ಮೇಲ್ ನಮೂದಿಸಿ ಪಾಸ್ವರ್ಡ್ ಸೆಟ್ ಮಾಡಬೇಕು. ಲಾಗಿನ್ ಆದ ನಂತರ ನಮಗೆ ಬೇಕಾದ ದೇಗುಲವನ್ನು ಆಯ್ಕೆ ಮಾಡಿ ಪ್ರಸಾದವನ್ನು ಆಯ್ಕೆ ಮಾಡಬೇಕು. ಪಾವತಿ ಮಾಡಿದ ನಂತರ ಕಾರ್ಟ್ನಲ್ಲಿ ನಿಮ್ಮ ಆರ್ಡರ್ ಡಿಸ್ಪ್ಲೇ ಆಗುತ್ತದೆ.
ಯಾವ್ಯಾವ ದೇವಸ್ಥಾನಗಳ ಪ್ರಸಾದ ಲಭ್ಯ?
1) ಬೆಂಗಳೂರು ಜಯನಗರದ ಶ್ರೀವಿನಾಯಕಸ್ವಾಮಿ ದೇವಾಲಯ
2) ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ
3) ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ
4) ಮಂಡ್ಯದ ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ
5) ಮೈಸೂರು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ
6) ಕೋಲಾರದ ಮಾಲೂರಿನ ಶ್ರೀ ಪುಸನ್ನ ವೆಂಕಟರಮಣ ಸ್ವಾಮಿ ದೇವಾಲಯ
7) ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ, ಬೀದರ್‌ನ ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ
8) ಬೆಳಗಾವಿ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ
9) ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
10) ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನ
11) ವಿಜಯನಗರದ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ
12) ಕೊಪ್ಪಳದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಾಲಯ
13) ಕಲಬುರಗಿಯ ಗಾಣಗಾಪುರದ ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಇವುಗಳ ಪ್ರಸಾದ ಆನ್ಲೈನ್ನಲ್ಲಿ ಸಿಗಲಿದೆ.
ಯಾವೆಲ್ಲ ಪ್ರಸಾದಗಳು ಸಿಗಲಿವೆ?
ಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ,ಭಸ್ಮ,ಬಿಲ್ವಪತ್ರೆ, ಕುಂಕುಮ, ಹೂವು ಸೇರಿದಂತೆ ಆಯಾ ದೇವಸ್ಥಾನಗಳ ಪ್ರಮುಖ ಪ್ರಸಾದವನ್ನು ಭಕ್ತರು ತರಿಸಿಕೊಳ್ಳಬಹುದಾಗಿದೆ.ಇತ್ತೀಚಿನ ದಿನಗಳಲ್ಲಿ ದೂರದ ದೇವಸ್ಥಾನಗಳಿಗೆ ಹೋಗಿ, ಜನರ ದಟ್ಟಣೆಯ ನಡುವೆ ದೇವರ ದರ್ಶನ ಪಡೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿ ಪ್ರಸಾದ ಪಡೆಯಲು ಕಷ್ಟವಾಗುವ ಕಾರಣ ಭಕ್ತರ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ಹೊಸ ಪ್ರಯೋಗ ನಡೆಸಿದೆ.