ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಬಿಜೆಪಿ ಶಿಸ್ತು ಸಮಿತಿಯು ಇತ್ತೀಚಿಗೆ ಶಾಸಕರಾದಂತಹ ಎಸ್ ಟಿ ಸೋಮಶೇಖರ ಹಾಗೂ ಶಿವರಾಂ ಹೆಬ್ಬಾರ್ ಅವರಿಗೆ ನೋಟಿಸ್ ನೀಡಿತ್ತು. ಈ ಒಂದು ನೋಟಿಸ್ ನೀಡಿದ ವಿಚಾರವಾಗಿ ಶಾಸಕ ಶಿವರಾಂ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ರಾಜ್ಯದ 224 ಶಾಸಕರ ಪೈಕಿ ನಾನು ಒಬ್ಬನಾಗಿದ್ದೇನೆ ಎಂದು ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಭಯ ಇಲ್ಲ. ಹೈಕಮಾಂಡ್ ಹೇಳಿರುವ ಗಡುವಿನ ಒಳಗೆ ಉತ್ತರ ನೀಡುತ್ತೇನೆ. ಪಾಪ ಅಮಾಯಕ ಬಿಪಿ ಹರೀಶ್ ಗು ನೋಟಿಸ್ ಕೊಟ್ಟಿದ್ದಾರೆ. ಯಾರನ್ನೋ ರಕ್ಷಿಸಲು ಇನ್ಯಾರಿಗೋ ನೋಟಿಸ್ ಕೊಟ್ಟಿದ್ದಾರೆ ಜಿಲೇಬಿ ತಿನ್ನುವವರೇ ಬೇರೆ, ಜೈಲಿಗೆ ಹೋಗುವವರೇ ಬೇರೆ ಎಂದು ತಿಳಿಸಿದರು.
ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ರಾಜ್ಯದ 224 ಶಾಸಕರ ಪೈಕಿ ನಾನು ಒಬ್ಬ. ನಾನು ಬಿಜೆಪಿ ಶಾಸಕನಷ್ಟೇ ಅಲ್ಲ ಸರ್ಕಾರದ ಭಾಗವು ಆಗಿದ್ದೇನೆ. ನಾನು ಸಚಿವನಾಗಿದ್ದಾಗ ಎಲ್ಲಾ ಪಕ್ಷದವರು ಬಂದಿದ್ದರು ನಾನು ಯಾವುದೇ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಹೇಳಿಕೆ ನೀಡಿದರು.