ಬೆಂಗಳೂರು : FIR ದಾಖಲಿಸುವ ಮುನ್ನವೇ ದಾಖಲೆಗಳನ್ನು ಸಂಗ್ರಹ ಮಾಡುವುದು ಕಾಯ್ದೆಯ ಉಲ್ಲಂಘನೆ ಆಗುತ್ತದೆ. ಎಫ್ಐಆರ್ ದಾಖಲಿಸದೆ ಮತ್ತು ಪೂರ್ವಾನುಮತಿ ಪಡೆಯದೆ ಲೋಕಾಯುಕ್ತ ಪೊಲೀಸರು ನಡೆಸಿರುವ ಎಲ್ಲಾ ಕಾರ್ಯಗಳೂ ಅನೂರ್ಜಿತ ಎಂದು ಹೈಕೋರ್ಟ್ ತಿಳಿಸಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯಿತಿ ಕಚೇರಿಯ 2015-16ನೇ ಸಾಲಿನಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್.ಲಕ್ಷ್ಮೀ ಸೇರಿದಂತೆ ಇತರೆ ಇಬ್ಬರು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಪೊಲೀಸರು ದಾಖಲೆಗಳ ಸಂಗ್ರಹಣೆ ಮಾಡುವುದು ಹಾಗೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ತನಿಖಾಧಿಕಾರಿ ವಿಚಾರಣೆ/ ತನಿಖೆ ನಡೆಸುವುದನ್ನು ಕಾಯ್ದೆ ಸೆಕ್ಷನ್ 17(ಎ) ನ ಸ್ಪಷ್ಟ ಉಲ್ಲಂಘನೆ ಎಂದು ಹೈಕೋರ್ಟ್ ತಿಳಿಸಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1983ರ ಸೆಕ್ಷನ್ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಲೋಕಾಯುಕ್ತ ಪೊಲೀಸರು ಅನಾಮಧೇಯ ದೂರು ಆಧರಿಸಿ ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್ ದಾಖಲಿಸುವ ಹಾಗೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಮುನ್ನ ವಿವರವಾದ ಪ್ರಾಥಮಿಕ ತನಿಖೆ ನಡೆಸುವುದು, ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವುದು ಮತ್ತು ದಾಖಲೆ ಸಂಗ್ರಹಿಸುವುದು, ದಸ್ತಾವೇಜು ನಿರ್ಮಿಸುವುದು ಕಾನೂನು ಬಾಹಿರ ಕ್ರಮ. ಅಂತಹ ಸಂಶೋಧನೆಯು ಸೆಕ್ಷನ್ 17(ಎ) ಅನ್ನು ರೂಪಿಸಿದ ಶಾಸಕಾಂಗದ ಉದ್ದೇಶವನ್ನೇ ನಿಷ್ಕ್ರಿಯಿಸಿದಂತಾಗಲಿದೆ ಎಂದು ಪೀಠ ಹೇಳಿದೆ.
ಆದರೆ, ಅರ್ಜಿದಾರರ ವಿರುದ್ಧದ ಭ್ರಷ್ಟಾಚಾರ ಆರೋಪಗಳಿದ್ದರೆ, ಆ ಬಗ್ಗೆ ತನಿಖೆ ನಡೆಸುವುದು ಅಗತ್ಯ. ಅರ್ಜಿದಾರರ ವಿರುದ್ಧದ ತನಿಖೆಗೆ ಸೆಕ್ಷನ್ 17(ಎ) ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಸದ್ಯ ಪೂರ್ವಾನುಮತಿ ದೊರೆತಿದೆ. ಆದ್ದರಿಂದ ಪ್ರಕರಣವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ಮುಕ್ತವಾಗಿರಿಸಲಾಗಿದೆ ಎಂದು ಪೀಠ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.