ಚಿಕ್ಕಬಳ್ಳಾಪುರ : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತ್ರತ್ವದಲ್ಲಿ ಅಖಂಡ ಕರ್ನಾಟಕ ಬಂದ್ ಆಚರಣೆ ನಡೆಯಲಿದೆ. ಚಿಕ್ಕಬಳ್ಳಾಪುರದಲ್ಲಿ ಕನ್ನಡಪರ ಹೋರಾಟಗಾರರು ಶಿವಸೇನೆ ಪ್ರತಿಕೃತಿಯನ್ನು ದಹಿಸಿ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಬಂದ್ ಬೆಂಬಲಿಸಿ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಶಿವಸೇನೆ ಪ್ರತಿಕೃತಿಯನ್ನು ದಹಿಸಿ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಚಿಕ್ಕಬಳ್ಳಾಪುರ ನಗರದ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕನ್ನಡ ಸೇನೆ ಕರವೇ ಶಿವರಾಮೇಗೌಡ ಬಣ ಮುಖಂಡರು ಪ್ರತಿಭಟಿಸಿದರು. ಇದೆ ವೇಳೆ ಕರ್ನಾಟಕ ಬಂದ್ ಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.
ಇನ್ನೊಂದು ಕಡೆ ಮೈಸೂರಿನಲ್ಲಿ ಕನ್ನಡಪರ ಸಂಘಟನೆಗಳು ಕೆಎಸ್ಆರ್ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.ಬೆಳಗಿನ ಜಾವ 6 ಗಂಟೆ ಸುಮಾರಿಗೆ ಮೈಸೂರಿನ ಬಸ್ ನಿಲ್ದಾಣದ ಬಳಿ ತೆರಳಿದ ಕನ್ನಡ ಪರ ಸಂಘಟನೆಗಳು ಬಸ್ ಸಂಚರಿಸುತ್ತಿದ್ದನ್ನು ಗಮನಿಸಿ ಆಕ್ರೋಶ ಹಾಕಿದ್ದಾರೆ. ಕೂಡಲೇ ಬಸ್ಸಿನ ಚಾಲಕರಿಗೆ ಕನ್ನಡ ಪರ ಹೋರಾಟಗಾರರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಈ ವೇಳೆ ಬಸ್ಸಿನ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.