ಮಂಡ್ಯ : ಹೊಳಿ ಹಬ್ಬದ ನಿಮಿತ್ಯವಾಗಿ ಪಾರ್ಟಿಯಲ್ಲಿ ಕಲುಷಿತ ಆಹಾರ ಸೇವನೆಯಿಂದಾಗಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರ ಗ್ರಾಮದ ಗೋಕುಲ ವಿದ್ಯಾ ಸಂಸ್ಥೆಯಲ್ಲಿ ನಡೆದಿತ್ತು.
ಮೇಘಾಲಯ ಮೂಲದ ಕೇರ್ ಲಾಂಗ್ (14) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದ, ನಿನ್ನೆ ನಾಮೀಬಂತೈ (12) ಎಂಬ ವಿದ್ಯಾರ್ಥಿ ಕೂಡ ಮೃತಪಟ್ಟಿದ್ದ.ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ?
ಕಳೆದ ಮಾರ್ಚ್ 14 ರಂದು ಮಳವಳ್ಳಿ ಪಟ್ಟಣದ ಮದನ್ ಲಾಲ್ ಕಲ್ಯಾಣ ಮಂಟಪದಲ್ಲಿ ಪುಷ್ಪೇಂದ್ರ ಕುಮಾರ್ ಹೋಳಿ ಹಬ್ಬ ಆಚರಣೆ ಮಾಡಿದ್ದರು. ಈ ಹೋಳಿ ಹಬ್ಬಕ್ಕೆ ಸಿದ್ದರಾಜು ಎಂಬವರ ಹೋಟೆಲ್‌ನಲ್ಲಿ ಪಲಾವ್ ಮಾಡಿಸಲಾಗಿತ್ತು. ಉಳಿಕೆಯಾದ ಪಲಾವ್ ಅನ್ನು ಕಾಗೇಪುರದ ಗೋಕುಲ ವಿದ್ಯಾ ಸಂಸ್ಥೆಗೆ ಕಳುಹಿಸಲಾಗಿತ್ತು.
ಈ ವಸತಿ ಶಿಕ್ಷಣ ಸಂಸ್ಥೆಯಾದ ಅಲ್ಲಿ ಮೇಘಾಲಯ ಹಾಗೂ ನೇಪಾಳ ಮೂಲದ ಮಕ್ಕಳು ಕಲಿಯುತ್ತಿದ್ದಾರೆ. ಊಟ ಸೇವಿಸಿದ್ದ ಮಕ್ಕಳು ಶನಿವಾರ ಬೆಳಿಗ್ಗೆ ಅಸ್ವಸ್ಥಗೊಂಡಿದ್ದರು. ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಮಕ್ಕಳಲ್ಲಿ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮಂಡ್ಯದ ಮಿಮ್ಸ್ ಮತ್ತು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಮಕ್ಕಳ ಪೈಕಿ 6ನೇ ತರಗತಿ ವಿದ್ಯಾರ್ಥಿ, ಮೇಘಾಲಯದ ಕಿರ್ಶನ್ ಲ್ಯಾಂಗ್ (13) ಭಾನುವಾರ ಮೃತಪಟ್ಟಿದ್ದ.ಬಳಿಕ ನಿನ್ನೆ ಮತ್ತೊರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದ. ನಮೀಬ್ ಮಾಂತೆ ಮೃತ ವಿದ್ಯಾರ್ಥಿ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.