ಚಿಕ್ಕಮಗಳೂರು : ಚಿಕ್ಕಮಂಗಳೂರು ಜಿಲ್ಲೆಯ ಕಳಸ ತಾಲೂಕಿನ ಸರ್ಕಾರಿ ಪಬ್ಲಿಕ್ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಪತ್ತೆಯಾಗಿದ್ದಂತಹ ಶ್ರೇಯಸ್ (16) ಎನ್ನುವ ವಿದ್ಯಾರ್ಥಿಯ ಮೃತ ದೇಹ ಭದ್ರಾ ನದಿಯಲ್ಲಿ ಪತ್ತೆಯಾಗಿದೆ.
ಕಳಸ ಪಬ್ಲಿಕ್ ಸ್ಕೂಲ್‍ನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಳೆಹೊಳೆ ಮೂಲದ ವಿದ್ಯಾರ್ಥಿ ಶ್ರೇಯಸ್(16) ಎಂಬ ವಿದ್ಯಾರ್ಥಿ ಮಾ.16ರಿಂದ ಕಾಣೆಯಾಗಿದ್ದ. ಶಾಲೆ ಬಿಟ್ಟ ನಂತರ ವಿದ್ಯಾರ್ಥಿ ಮನೆಗೆ ತೆರಳಿರಲಿಲ್ಲ. ಈ ಬಗ್ಗೆ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿಯ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ಹುಡುಕಾಟ ನಡೆಸಲಾಗಿತ್ತು.
ಮಂಗಳವಾರ ರಾತ್ರಿ ಕಳಸ ಬಾಳೆಹೊಳೆ ನಡುವಿನ ಹಳುವಳ್ಳಿ ಬಳಿ ಭದ್ರಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮೇಲಿತ್ತಿ ಪರಿಶೀಲಿಸಲಾಗಿ ಅದು ನಾಪತ್ತೆಯಾಗಿದ್ದ ವಿದ್ಯಾರ್ಥಿಯದ್ದೇ ಎಂದು ತಿಳಿದು ಬಂದಿದೆ. ಈತ ಮೂಲತಃ ಬೇಲೂರಿನವನಾಗಿದ್ದು, ಬಾಳೆಹೊಳೆಯಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಕಳಸ ಪಬ್ಲಿಕ್ ಸ್ಕೂಲ್‍ಗೆ ಹೋಗುತ್ತಿದ್ದ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.