ರಾಜಸ್ತಾನ್ : ಇಂದು ಎಲ್ಲೆಡೆ ಹೊಳಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಆದರೆ ಜೈಪುರ್ ನಲ್ಲಿ ಬಣ್ಣದ ಹಬ್ಬದ ದಿನದಂದೆ ಘೋರ ಘಟನೆ ನಡೆದಿದೆ. ಹೌದು ಹಬ್ಬದಂದು ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಯುವಕನನ್ನು ಮೂವರು ವ್ಯಕ್ತಿಗಳು ಸೇರಿ ಥಳಿಸಿ ಬಳಿಕ ಕತ್ತು ಹಿಸುಕಿ ಹತ್ಯೆಗೈದ ಘಟನೆ ರಾಜಸ್ಥಾನದ ಜೈಪುರ್ ನಲ್ಲಿ ನಡೆದಿದೆ.
ದೌಸಾ ಜಿಲ್ಲೆಯ ರಾಲ್ವಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದ ಯುವಕನನ್ನು ಹಂಸರಾಜ್ ಎಂದು ಗುರುತಿಸಲಾಗಿದೆ. ಹಂಸರಾಜ್ ಸ್ಥಳೀಯ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಇಲ್ಲಿಗೆ ಬಂದ ಅಶೋಕ್, ಬಬ್ಲು ಮತ್ತು ಕಲುರಾಮ್ ಬಣ್ಣ ಬಳಿಯಲು ಯತ್ನಿಸಿದ್ದರು. ಈ ವೇಳೆ ಯುವಕ ನಿರಾಕರಿಸಿದ್ದಕ್ಕೆ, ಮೂವರು ಆತನಿಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದರು.
ಬಳಿಕ ಅದರಲ್ಲಿ ಒಬ್ಬ ಕತ್ತು ಹಿಸುಕಿ ಆತನನ್ನು ಹತ್ಯೆಗೈದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಅಗರ್ವಾಲ್ ತಿಳಿಸಿದ್ದಾರೆ. ಹತ್ಯೆಯನ್ನು ಖಂಡಿಸಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಹಂಸರಾಜ್ ಅವರ ಶವವನ್ನು ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಿಸಿ ಪ್ರತಿಭಟನೆ ನಡೆಸಿದ್ದಾರೆ.