ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರೇ ನೀವೇನಾದರೂ ನಿಮ್ಮ ಆಸ್ತಿಯ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದೀರಾ, ಹಾಗಾದರೆ, ಮಾ.31ರೊಳಗೆ ಪಾವತಿಸಿ. ಇಲ್ಲವಾದರೇ ಏ.1 ರಿಂದ ಬಾಕಿ ಇರುವ ಆಸ್ತಿ ತೆರಿಗೆ ಮೊತ್ತಕ್ಕೆ ಸರಿಸಮನಾದ ಮೊತ್ತವನ್ನು ದಂಡ ರೂಪದಲ್ಲಿ ಪಾವತಿಸಬೇಕಾಗಲಿದೆ.
ಹೌದು ಆಸ್ತಿಯ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದರೆ ತಕ್ಷಣ ಪಾವತಿ ಮಾಡಿ ಅದಕ್ಕೆ ಮಾರ್ಚ್ 31 ಕೊನೆಯ ದಿನವಾಗಿದೆ. ಅಕಸ್ಮಾತ್ ನೀವು ಬಾಕಿ ತೆರಿಗೆ ಪಾವತಿಸದೆ ಹೋದಲ್ಲಿ ಏಪ್ರಿಲ್ ಒಂದರಿಂದ ನಿಮಗೆ ದಂಡ ಬೀಳೋದಂತೂ ಫಿಕ್ಸ್.ರಾಜ್ಯ ಸರ್ಕಾರವು ಕಳೆದ ವರ್ಷ ಬಿಬಿಎಂಪಿಯ ಕಾಯ್ದೆಗೆ ತಿದ್ದುಪಡಿ ಮಾಡಿ ಆಸ್ತಿ ತೆರಿಗೆ ಮೇಲಿನ ದಂಡ ಪ್ರಮಾಣವನ್ನು ಎರಡರಿಂದ ಒಂದು ಪಟ್ಟಿಗೆ ಇಳಿಕೆ ಮಾಡಿತ್ತು. ಜತೆಗೆ, ಒಂದು ವರ್ಷ ಕಾಲ ದಂಡ ಪ್ರಮಾಣವನ್ನು 100ರೂ.ಗೆ ನಿಗದಿ ಪಡಿಸಿ ವಿನಾಯಿತಿ ನೀಡಿತ್ತು.
ಇದೀಗ ಮಾ.31ಕ್ಕೆ ವಿನಾಯಿತಿ ಅವಧಿ ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ, ಏಪ್ರಿಲ್ 1 ರಿಂದ ರೂ.100ಕ್ಕೆ 100 ದಂಡ ವಿಧಿಸುವ ಹಾಗೂ ವಾರ್ಷಿಕ ಬಾಕಿ ಮೊತ್ತಕ್ಕೆ ಶೇ.9 ರಿಂದ 15 ರಷ್ಟು ದಂಡ ವಿಧಿಸುವ ನಿಯಮ ಜಾರಿಗೆ ಬರುತ್ತಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ತಪ್ಪು ಆಸ್ತಿ ಘೋಷಣೆ ಮಾಡಿಕೊಂಡವರಿಗೆ, ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದೇ ಇರುವ ಆಸ್ತಿಗಳಿಗೆ ಹಾಗೂ ಅನಿವಾರ್ಯ ಕಾರಣದಿಂದ ತಡವಾಗಿ ಆಸ್ತಿ ತೆರಿಗೆ ಪಾವತಿ ಮಾಡುವ ಆಸ್ತಿ ಮಾಲೀಕರಿಗೆ ಸೇರಿದಂತೆ ಎಲ್ಲರಿಗೂ ಒಂದೇ ಮಾದರಿಯಲ್ಲಿ ದಂಡ ವಿಧಿಸುವ ಪದ್ಧತಿ ಜಾರಿಯಾಗಲಿದೆ.
ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 1,82,467 ಆಸ್ತಿ ಮಾಲೀಕರು ಸುಮಾರು ₹390 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಮಹದೇವಪುರ, ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿದ್ದಾರೆ.ಕಾಯ್ದೆ ತಿದ್ದುಪಡಿಗೂ ಮುನ್ನಾ, ತಡವಾಗಿ ಆಸ್ತಿ ತೆರಿಗೆ ಪಾವತಿದಾರರಿಗೆ ಆಸ್ತಿ ತೆರಿಗೆ ಮೊತ್ತದೊಂದಿಗೆ ₹100 ದಂಡ ಮಾತ್ರ ವಿಧಿಸಲಾಗುತ್ತಿತ್ತು. ತಪ್ಪು ಆಸ್ತಿ ಘೋಷಣೆ ಮಾಡಿಕೊಂಡು ತೆರಿಗೆ ವಂಚನೆ ಪ್ರಕರಣದಲ್ಲಿ ಮಾತ್ರ ಆಸ್ತಿ ತೆರಿಗೆ ಮೊತ್ತದ ಎರಡು ಪಟ್ಟು ದಂಡ ವಿಧಿಸಲಾಗುತ್ತಿತ್ತು. ಇದೀಗ ಎಲ್ಲರಿಗೂ ಒಂದು ಮಾದರಿ ದಂಡ ವಿಧಿಸಲಾಗುತ್ತಿದೆ.