ಬೆಂಗಳೂರು : “ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಂತಹ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ಅನುಕೂಲ ಮಾಡಿಕೊಡುವ ಹಾಗೂ ಹುದ್ದೆಗಳನ್ನು ಕೊಡುವ ಹಕ್ಕು ನಮಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರ, ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಕೂರಿಸಲಾಗಿದೆ. ಅವರಿಗೆ ವೇತನ ನೀಡಲಾಗುತ್ತಿದೆ ಎನ್ನುವ ಆಕ್ಷೇಪಕ್ಕೆ ಉತ್ತರ ನೀಡಲು ಮುಂದಾದಾಗ ಗದ್ದಲ ಎಬ್ಬಿಸಿದ ವಿಪಕ್ಷಗಳ ಸದಸ್ಯರಿಗೆ ಡಿಸಿಎಂ ಅವರು ಮಂಗಳವಾರ ತಿರುಗೇಟು ನೀಡಿದರು.
“52 ಸಾವಿರ ಕೋಟಿ ರೂಪಾಯಿಯ ಬೃಹತ್ ಯೋಜನೆ ಜನರಿಗೆ ತಲುಪುತ್ತಿದೆಯೋ ಇಲ್ಲವೋ ಎಂಬುದನ್ನು ಮನೆ, ಮನೆಗೆ ತೆರಳಿ ಪರೀಕ್ಷೆ ಮಾಡಿ. ಜನರಿಗೆ ಉಪಯೋಗವಾಗುತ್ತಿದೆಯೋ ಇಲ್ಲವೋ ಎಂದು ತಿಳಿಯಲು ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟರೆ ಅದನ್ನು ನಿಮ್ಮ ಕೈಯಲ್ಲಿ ತಡೆದುಕೊಳ್ಳಲು ಆಗುತ್ತಿಲ್ಲವಲ್ಲ” ಎಂದು ಲೇವಡಿ ಮಾಡಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಅಶೋಕ ಅವರು, 187 ಕೋಟಿ ರೂಪಾಯಿ ಸರ್ಕಾರದ ಹಣವನ್ನು ಬಳ್ಳಾರಿಯಲ್ಲಿ ಹಂಚಿದ್ದಾರೆ, ಪಕ್ಷಕ್ಕೆ ಕಾರ್ಯಕರ್ತರಿಗೆ ಬಳಸಿಕೊಂಡಿದ್ದಾರೆ ಎಂದರು. ಈ ಮಾತಿಗೆ ಕೆರಳಿದ ಡಿಸಿಎಂ ಅವರು, “ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಲಿ, ಇದಕ್ಕೆ ನಾವು ಉತ್ತರ ನೀಡುತ್ತೇವೆ. ಬಜೆಟ್ ಮೇಲೆ ಚರ್ಚೆ ಸಂದರ್ಭ ಈ ವಿಚಾರ ಮಾತನಾಡಿ” ಎಂದರು.
“ಈ ರಾಜ್ಯದ ಜನ ನಮಗೆ 138 ಸ್ಥಾನಗಳನ್ನು ನೀಡಿ ಶಕ್ತಿ ತುಂಬಿದ್ದಾರೆ. ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು ಬಂದು ನಮಗೂ ಸಮಿತಿಗಳಲ್ಲಿ ಅಧ್ಯಕ್ಷ, ಸದಸ್ಯ ಸ್ಥಾನ ನೀಡಿ ಎಂದು ಮನವಿ ಮಾಡಿದ್ದಾರೆ. ಇದು ನನ್ನೊಬ್ಬನ ನಿರ್ಧಾರವಲ್ಲ, ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಾವು ಎಂದಿಗೂ ನಮ್ಮ ಕಾರ್ಯಕರ್ತರ ಜತೆ ಇದ್ದೇ ಇರುತ್ತೇವೆ” ಎಂದರು.
ಈ ವೇಳೆ ವಿಪಕ್ಷಗಳ ಶಾಸಕರು ಗದ್ದಲ ಎಬ್ಬಿಸಿದಾಗ ಶಿವಕುಮಾರ್ ಅವರು, ಡಿವಿಜಿಯವರ,
“ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ
ಉದ್ಧರಿಸುವೆನು ಜಗವನೆನ್ನುತಿಹ ಸಖನೆ,
ನಿನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ” ಎಂಬ ಕವನ ಹೇಳುವ ಮೂಲಕ ತಿರುಗೇಟು ನೀಡಿದರು.
“ನಾವು ಗ್ಯಾರಂಟಿಗಳನ್ನು ವಿರೋಧ ಮಾಡಿಲ್ಲ” ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದಾಗ ಉತ್ತರಿಸಿದ ಡಿಸಿಎಂ ಅವರು, “ಪ್ರಾರಂಭದಲ್ಲಿ ಗ್ಯಾರಂಟಿಗಳಿಗೆ ವಿರೋಧ ಮಾಡಿದರು. ಆದರೂ ನಾವು ಜಾರಿಗೆ ತಂದೆವು. ಅದು ಜನರಿಗೆ ತಲುಪಿತು. ಪ್ರಧಾನಮಂತ್ರಿಗಳಿಂದ ಹಿಡಿದು ಪ್ರತಿಪಕ್ಷದ ಪ್ರತಿಯೊಬ್ಬರೂ ಗ್ಯಾರಂಟಿ ಯೋಜನೆಗಳಿಗೆ ಟೀಕೆ ಮಾಡಿರುವವರೇ” ಎಂದರು.
ಮನೆಹಾಳು ಪದ ಕಡತದಲ್ಲಿ ಇರಲಿ
ಗ್ಯಾರಂಟಿ ಅನುಷ್ಟಾನ ಸಮಿತಿ ಮೂಲಕ ಕಾರ್ಯಕರ್ತರಿಗೆ ವೇತನ ನೀಡಿ ಕಾಂಗ್ರೆಸ್ ʼಮನೆಹಾಳುʼ ಮಾಡುತ್ತಿದೆ ಎನ್ನುವ ಆರ್. ಅಶೋಕ್ ಮಾತಿಗೆ ತಿರುಗೇಟು ನೀಡಿದ ಶಿವಕುಮಾರ್ ಅವರು, “ಆರ್.ಅಶೋಕ್ ಬಳಸಿರುವ ಮನೆಹಾಳು ಪದ ಕಡತಲ್ಲಿಯೇ ಉಳಿಯಲಿ. ನಾವು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಮನೆ ಕಟ್ಟುತ್ತಿದ್ದೇವೆ. ಆದರೂ ಮನೆಹಾಳು ಪದ ಪ್ರಯೋಗಿಸಿದ್ದಾರೆ” ಎಂದು ಶಿವಕುಮಾರ್ ಅವರು ತಿವಿದರು.
ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ಕೋರ್ಟ್ ಆದೇಶ | Arvind Kejriwa
ಸಾರ್ವಜನಿಕರೇ ಗಮನಿಸಿ : ವರ್ಷಕ್ಕೊಮ್ಮೆಯಾದರೂ ಈ 10 `ರಕ್ತ ಪರೀಕ್ಷೆ’ ಮಾಡಿಸಲೇಬೇಕು.!