ವಿಜಯನಗರ : ದುಬೈನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟಿ ರನ್ಯಾ ರಾವ್ 15 ದಿನಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮಾಜಿ ಶಾಸಕ ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು ಇದಕ್ಕೆ ಸರ್ಕಾರವೇ ಕುಮ್ಮಕ್ಕು ನೀಡಿದ್ದು, ಶೀಘ್ರದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ವಿಜಯನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಭಾವಿ ಸಚಿವರ ಕುಮ್ಮಕ್ಕಿನಿಂದ ನಟಿ ರನ್ಯಾ ರಾವ್ ಪ್ರಕರಣದಲ್ಲಿ 25 ಕೋಟಿ ಸ್ಮಗ್ಲಿಂಗ್ ನಡೆದಿದೆ. ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಪವರ್ ಶೇರಿಂಗ್ ಅವರ ಹೆಸರಿನಲ್ಲಿ ಸಿಎಂ ಡಿಸಿಎಂ ಹೊಡೆದಾಡುಕೊಳ್ಳುತ್ತಿದ್ದಾರೆ. ನೂರಕ್ಕೆ ನೂರು ಈ ಸರ್ಕಾರ ಪೂರ್ಣಗೊಳಿಸಲ್ಲ. ರಾಜ್ಯ ಸರ್ಕಾರ ಪತನ ಆಗುತ್ತದೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿಕೆ ನೀಡಿದರು.
ಫೆಬ್ರವರಿ 27ರಿಂದಲೇ ವೀರಶೈವ ಲಿಂಗಾಯತ ಸಭೆ ಆರಂಭಿಸಲಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಭೆ ಮಾಡಿದ್ದೇವೆ. ವಿಜಯನಗರ, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ಸಭೆ ನಡೆಸಿದ್ದು ವೀರಶೈವ ಲಿಂಗಾಯತ ಒಳಪಂಗಡ ಒಗ್ಗೂಡಿಸುವುದು ನಮ್ಮ ಉದ್ದೇಶವಾಗಿದೆ. ಮಹಾ ಸಂಗಮದ ಹೆಸರಿನಲ್ಲಿ ಸಭೆ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದರು.