ಬೆಂಗಳೂರು : ಬಿಪಿಎಲ್ ಸೇರಿದಂತೆ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಸದ್ಯಕ್ಕೆ ಹೊಸ ಪಡಿತರ ಚೀಟಿ ಹಂಚಿಕೆ ಮಾಡಲ್ಲ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ರಾಜ್ಯದಲ್ಲಿ ಕೇಂದ್ರ ನಿಗದಿ ಮಾಡಿದ್ದ ರೇಷನ್ ಕಾರ್ಡ್ ನಿಗದಿ ಗುರಿ ಮುಕ್ತಾಯವಾಗಿದೆ. ಹೊಸ ಕಾರ್ಡ್ ಕೊಡಲು ಅವಕಾಶವಿಲ್ಲ. ಅನರ್ಹರ ಕಾರ್ಡ್ ರದ್ದು ಮಾಡುವವರೆಗೂ ಹೊಸ ಕಾರ್ಡ್ ಗಳನ್ನು ವಿತರಣೆ ಮಾಡುವುದಿಲ್ಲ. ಆದ್ದರಿಂದ ಹೊಸ ಅರ್ಜಿ ಹಾಕಿರುವ ಜನರು ಬಿಪಿಎಲ್ ಕಾರ್ಡ್ ಗಳಿಗಾಗಿ ಕಾಯಬೇಕು ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಕೊಡಲು ಸರ್ಕಾರದಲ್ಲಿ ಅವಕಾಶವಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಅನ್ವಯ 4,01,93,000 ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಣೆ ಮಾಡಲು ಗುರಿ ನಿಗದಿ ಮಾಡಲಾಗಿದ್ದು, ನಕಲಿ ದಾಖಲೆಗಳ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಪಡೆದಿರುವವರನ್ನು ಎಪಿಎಲ್ ರೇಷನ್ ಕಾರ್ಡ್ ವರ್ಗಾಯಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಸ್ವಯಂ ಪ್ರೇರಿತವಾಗಿ ತಮ್ಮ ಪಡಿತರ ರೇಷನ್ ಕಾರ್ಡ್ ಅನ್ನು ಹಿಂತಿರುಗಿಸಿದರೆ, ಅರ್ಹ ಫಲಾನುಭವಿಗಳಿಗೆ ಹೊಸ ಬಿಪಿಎಲ್ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಒಳ ಮೀಸಲು ಜಾರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಜಾರಿಗೆ ದತ್ತಾಂಶ ಬೇಕಿದ್ದು, ಈ ವಿಚಾರದಲ್ಲಿ ಜಸ್ಟೀಸ್ ನಾಗಮೋಹನ್‌ದಾಸ್ ಅವರ ಸಮಿತಿ ರಚಿಸಲಾಗಿದ್ದು, ವರದಿ ಬಂದ ಕೂಡಲೇ ಜಾರಿ ಮಾಡಲಾಗುವುದು. ಒಳ ಮೀಸಲಾತಿ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಅವರೊಂದಿಗೆ ಮಾತನಾಡಿದ್ದೇನೆ. ಸರ್ಕಾರ ಸಂಪೂರ್ಣವಾಗಿ ಒಳಮೀಸಲು ಪರವಾಗಿದೆ ಎಂದು ತಿಳಿಸಿದ್ದಾರೆ.