ಬೆಂಗಳೂರು: ಆಯುಷ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಅಲೋಪತಿ ವೈದ್ಯರುಗಳಿಗೆ ನೀಡಲಾಗುತ್ತಿರುವ ವೇತನ ಶ್ರೇಣಿ, ವೇತನ ಭತ್ಯೆ ಸೌಲಭ್ಯ ಮತ್ತು ಸ್ಥಾನಮಾನಗಳನ್ನು ಸಮಾನಾಂತರವಾಗಿ ವಿಸ್ತರಿಸಿ ಕಾಲ ಕಾಲಕ್ಕೆ ಸಮಾನತೆ ಕಾಪಾಡುವ ಸರ್ಕಾರದ ನೀತಿ ವಿಷಯಕ್ಕೆ ಅನುಮೋದನೆ ನೀಡಲಾಗಿದೆ ಹಾಗೂ ವೇತನ ಮತ್ತು ಭತ್ಯೆಗಳಿಗೆ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಗುರುವಾರದಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ರಿಜ್ವಾನ್ ಅರ್ಷದ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಆದೇಶ ಸಂಖ್ಯೆ :ಆಕುಕ ಪಿಐಯಂ 2016 ದಿನಾಂಕ: 18-18-2016ರನ್ವಯ ಅಲೋಪತಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೆ 2016ರಲ್ಲಿ ನೀಡಿದ ಪರಿಷ್ಕøತ ವಿಶೇಷ ಭತ್ಯೆಯನ್ನು ಆಯುಷ್ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೂ ವಿಸ್ತರಿಸಲಾಗಿದೆ. ಪ್ರಸ್ತುತ ಇಲಾಖೆಯಲ್ಲಿ 180 ಖಾಯಂ ವೈದ್ಯರುಗಳು ಸ್ನಾತಕೋತ್ತರ ಪದವಿ ಪಡೆದು ಸೇವೆ ಸಲ್ಲಿಸುತ್ತಿದ್ದು, ಇವರುಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಆಯುಷ್ ಆಸ್ಪತ್ರೆಗಳಲ್ಲಿ ತೈನಾತಿಸಿಕೊಂಡು ಸಾರ್ವಜನಿಕರಿಗೆ ಪೂರ್ಣ ಪ್ರಮಾಣದ ವಿವಿಧ ತಜ್ಞತೆ ಅನುಸಾರ ಸೇವೆಯನ್ನು ನೀಡುವ ಬಗ್ಗೆ ನಿಯಮಗಳನುಸಾರ ಕ್ರಮ ವಹಿಸಲಾಗುತ್ತಿದೆ. ವೇತನ ಮತ್ತು ಭತ್ಯೆಗಳಿಗೆ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಸಚಿವರು ಉತ್ತರಿಸಿದರು.
ಕೆ.ಎಸ್.ಎಸ್.ಐ.ಡಿ.ಸಿ ಯಿಂದ ಸರ್ಕಾರಕ್ಕೆ ರೂ.93.41 ಕೋಟಿ ಲಾಭಾಂಶ ವಿತರಣೆ