ಚಿತ್ರದುರ್ಗ : ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಕ್ಷೇತ್ರದ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳು, ಯೋಜನೆಗಳು, ಸೌಲಭ್ಯಗಳು ಹಾಗೂ ಆಯಾ ಇಲಾಖೆಗೆ ಸಂಬಂಧಿಸಿದ ಇನ್ನಿತರೆ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ವಸ್ತುಪ್ರದರ್ಶವನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ವಸ್ತುಪ್ರದರ್ಶನ ಏರ್ಪಡಿಸುವ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಯಕನಹಟ್ಟಿ ಗ್ರಾಮದ ಶ್ರೀ ಗುರುತಿಪ್ಪೇರುದ್ರಸ್ವಾಮಿ ಕ್ಷೇತ್ರದಲ್ಲಿ ಇದೇ ಮಾರ್ಚ್ 09 ರಿಂದ 24 ರವರೆಗೆ ಜಾತ್ರೆ ನಡೆಯಲಿದ್ದು, ಮಾರ್ಚ್ 16ರಂದು ದೊಡ್ಡ ರಥೋತ್ಸವ ನಡೆಯಲಿದೆ. ಜಾತ್ರೆಗೆ 3 ರಿಂದ 4 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಜಾತ್ರಾ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಸಹಕಾರದೊಂದಿಗೆ ಕನಿಷ್ಟ 10 ರಿಂದ 12 ಮಳಿಗೆಗಳಲ್ಲಿ ಕೃಷಿ, ಅರಣ್ಯ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಮುಂತಾದ ವಿವಿಧ ಇಲಾಖೆಗಳು ಪ್ರತಿ ವರ್ಷದಂತೆ ಈ ಬಾರಿಯೂ ಸಹ ವಸ್ತು ಪ್ರದರ್ಶವನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸ್ವ-ಸಹಾಯಕ ಸಂಘಗಳು ಹೆಚ್ಚಾಗಿರುವುದರಿಂದ ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಆಹಾರ ಮಳಿಗೆ ಸ್ಥಾಪನೆಗೆ ಅವಕಾಶ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಾರ್ಯಕ್ರಮಗಳು, ಸೌಲಭ್ಯಗಳ ಮಾಹಿತಿ ಸೇರಿದಂತೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಪಶು ಸಂಗೋಪನಾ ಇಲಾಖೆಯುವರು ಹಕ್ಕಿ ಜ್ವರದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಜತೆಗೆ ಪಶು ಸಂಗೋಪನೆ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ವಿಶೇಷವಾಗಿ ಕುರಿ ಸಾಕಾಣಿಕೆ ಕುರಿತು ಹಾಗೂ ಕುರಿಗಳ ತಳಿಗಳು ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ವತಿಯಿಂದ ಎಬಿಆರ್‍ಕೆ ನೋಂದಣಿ ಕುರಿತು ವಸ್ತು ಪ್ರದರ್ಶನದಲ್ಲಿ ಮಾಹಿತಿ ನೀಡಬೇಕು. ತೋಟಗಾರಿಕೆ ಇಲಾಖೆ ವತಿಯಿಂದ ಫಲ-ಪುಷ್ಪ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ನರಸಿಂಹಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಸ್ವ ಉದ್ಯೋಗಾಕಾಂಕ್ಷಿ ಮಹಿಳೆಯರ ಗಮನಕ್ಕೆ: ಉಚಿತ ಫ್ಯಾಶನ್ ಡಿಸೈನಿಂಗ್, ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ
ಬಜೆಟ್ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ 7 ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ: ಸಿದ್ಧರಾಮಯ್ಯ