ಬೆಂಗಳೂರು : ಸಾಮಾನ್ಯವಾಗಿ ಹಣ, ಚಿನ್ನ, ಬೆಳ್ಳಿ ಕಳ್ಳತನ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಬೆಂಗಳೂರಿನಲ್ಲಿ ವಿಚಿತ್ರವಾದಂತಹ ಕಳ್ಳತನ ನಡೆದಿದ್ದು, ಸುಮಾರು ಕೋಟಿ ರೂಪಾಯಿ ಮೌಲ್ಯದ ಕೂದಲನ್ನು ಮೂಟೆ ಮೂಟೆ ಹೊತ್ತು ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಹೌದು ಬರೋಬ್ಬರಿ 27 ಮೂಟೆಗ ಕೂದಲು ಕಳವಾಗಿದೆ. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಈ ಸಂಬಂದ ಗೋಡೌನ್ ಮಾಲೀಕ ವೆಂಕಟರಮಣ ಎಂಬವರು ದೂರು ನೀಡಿದ್ದಾರೆ. ಆರು ಜನ ಖದೀಮರು ವಾಹನದಲ್ಲಿ ಬಂದು ಕೂದಲು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಖದೀಮರ ಕುಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದಲ್ಲ, ಎರಡಲ್ಲ ಮೂಟೆಗಟ್ಟಲೇ ಕೂದಲನ್ನು ಕಳ್ಳರು ಕದೊಯ್ದಿದ್ದಾರೆ. ಸೋಲದೇವನಹಳ್ಳಿ ಬಳಿಯ ಲಕ್ಷ್ಮೀ ಪುರ ಕ್ರಾಸ್‌ನಲ್ಲಿರುವ ಗೋಡೌನ್‌ನಲ್ಲಿ ಕೂದಲನ್ನು ಸಂಗ್ರಹಿಸಿಡಲಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಕೂದಲಿನ ಮೂಟೆಗಳನ್ನು ಎರಡು ದಿನಗಳ ಹಿಂದೆ ಕಳ್ಳತನ ಮಾಡಲಾಗಿದೆ.
ಕಳೆದ ವಾರ ಚೀನಾದ ವ್ಯಕ್ತಿಗಳು ಬಂದು ವಿಗ್ ತಯಾರಿಕೆಗೆ ಕೂದಲು ಕಳುಹಿಸುವಂತೆ ಮಾತುಕತೆ ನಡೆಸಿದ್ದರು. ಅವರಿಗೆ ಕಳುಹಿಸಿಕೊಡುವುದಕ್ಕಾಗಿ ಕೂದಲನ್ನು ಮೂಟೆ ಕಟ್ಟಿ ಇಡಲಾಗಿತ್ತು. ಇನ್ನೇನು ಎರಡು ದಿನಗಳಲ್ಲಿ ಕೂದಲು ರಫ್ತು ಆಗಬೇಕು ಎನ್ನುವಷ್ಟರಲ್ಲಿ ತಲೆಗೂದಲು ಕಳ್ಳರ ಪಾಲಾಗಿದೆ. 27 ಮೂಟೆಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. CCTVದೃಶ್ಯ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.