ಉತ್ತರಕನ್ನಡ : SSLC ವಿದ್ಯಾರ್ಥಿನಿಯೋರ್ವಳು ಬಾಲಕಿಯರ ಬಾಲಮಂದಿರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಕಾರವಾರದ ಕೋಡಿಬಾಗದ ಬಳಿ ಇರುವ ಬಾಲಕಿಯರ ಬಾಲಮಂದಿರದಲ್ಲಿ ಶ್ವೇತಾ ಫಣೀಕರ (16) ಎನ್ನುವ SSLC ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಈಕೆಗೆ ಪಾಲಕರಿಲ್ಲದ ಕಾರಣದಿಂದ ಬಾಲಕಿಯರ ಬಾಲಮಂದಿರದಲ್ಲಿ ಆಸರೆ ಕಲ್ಪಿಸಲಾಗಿತ್ತು.
ಈ ಹಿಂದೆ ನಡೆಸಲಾದ ಪೂರ್ವಸಿದ್ಧತೆ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಳು. ಉಳಿದೆಲ್ಲ ವಿಷಯದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಳು. ಪರೀಕ್ಷೆಯಲ್ಲಿ ಉತ್ತಮ ಅಂಕ ಸಾಧನೆ ಮಾಡುವ ಕುರಿತು ಆಕೆಗೆ ಸಲಹೆ ನೀಡಲಾಗಿತ್ತು. ಆಕೆಯೂ ಆತ್ಮವಿಶ್ವಾಸದಲ್ಲಿದ್ದಳು ಎಂದು ಪ್ರೌಢಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಪೂರ್ವಸಿದ್ಧತೆ ಪರೀಕ್ಷೆ ನಡೆಯುತ್ತಿದ್ದು ಶಾಲೆಗೆ ಹೊರಡಲು ಸಿದ್ಧಗೊಳ್ಳುವುದಾಗಿ ಸಿಬ್ಬಂದಿಗೆ ತೆರಳಿದ ವಿದ್ಯಾರ್ಥಿನಿ ಕಟ್ಟಡ ಮೇಲಿನ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಮಂದಿರದ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಬಾಲಕಿಯ ಸಾವಿಗೆ ಕಾರಣ ಏನೆಂಬುದು ಇದುವರೆಗೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.