ಬೆಂಗಳೂರು : ಬೆಂಗಳೂರಲ್ಲಿ ಇಂದು ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, ಸೈಟ್ ವಿಚಾರದ ತನಿಖೆ ಹೆಸರಿನಲ್ಲಿ ಪೊಲೀಸ್ ಅಧಿಕಾರಿಯು ಕಿರುಕುಳ ನೀಡುತ್ತಿದ್ದರು ಎಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯದ ಶ್ರೀನಿವಾಸನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಮಹಾದೇವಯ್ಯ ಎಂದು ತಿಳಿದುಬಂದಿದೆ.ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಮಹದೇವಯ್ಯ ವಿರುದ್ಧ ಕಳೆದ ಫೆಬ್ರವರಿಯಲ್ಲಿ ರಾಜಗೋಪಾಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶಿವಶಂಕರ್ ಎಂಬುವವರು ಮಹದೇವಯ್ಯ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಮಹದೇವಯ್ಯ ಜಾಮೀನು ಪಡೆದ ಬಳಿಕ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದರು.
ತನಿಖೆ ಹೆಸರಲ್ಲಿ 15 ದಿನಗಳಿಂದ ಠಾಣೆಗೆ ಕರೆಸಿ ಟಾರ್ಚರ್ ಮಾಡುತ್ತಿದ್ದರು. ವಿಚಾರಣೆ ವೇಳೆ ರಾಜಗೋಪಾಲನಗರ ಠಾಣೆ ಇನ್ಸ್‌ಪೆಕ್ಟರ್ ಕಿರುಕುಳ ನೀಡಿದ್ದರು. ಊರುಬಿಟ್ಟು ಹೋಗಿ, ಇಲ್ಲದಿದ್ದರೆ ಹೇಳಿದವರಿಗೆ ಸೈಟ್ ರಿಜಿಸ್ಟರ್ ಮಾಡಿ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಮಹದೇವಯ್ಯ ಪತ್ನಿ ಆರೋಪಿಸಿದ್ದಾರೆ.ಇದರಿಂದ ಬೇಸತ್ತು ಮಹಾದೇವಯ್ಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.