ಚಂಡೀಗಢ: ‘ಡಂಕಿ ರೂಟ್’ ಮೂಲಕ ಅಕ್ರಮ ವಲಸೆಗೆ ಅನುಕೂಲ ಮಾಡಿಕೊಟ್ಟ ಟ್ರಾವೆಲ್ ಏಜೆಂಟರನ್ನು ಗುರಿಯಾಗಿಸಿಕೊಂಡು ನಡೆಸಿದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್ (ಯುಎಸ್) ನಿಂದ ಗಡೀಪಾರು ಮಾಡಿದ 11 ಅಕ್ರಮ ವಲಸಿಗರಿಗೆ ಸಮನ್ಸ್ ಜಾರಿ ಮಾಡಿದೆ.
ಅಮೆರಿಕದಿಂದ ಗಡಿಪಾರಾದ 11 ಅಕ್ರಮ ವಲಸಿಗರಿಗೆ ಜಾರಿ ನಿರ್ದೇಶನಾಲಯ ಮಂಗಳವಾರ ಸಮನ್ಸ್ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಅವರಲ್ಲಿ ಕನಿಷ್ಠ ಒಬ್ಬರು ಹರಿಯಾಣದವರು ಮತ್ತು ಇತರರು ಪಂಜಾಬ್ ಮೂಲದವರು.
ಈ ಗಡೀಪಾರುದಾರರಿಗೆ ವಿವಿಧ ದಿನಾಂಕಗಳಲ್ಲಿ ಜಾರಿ ನಿರ್ದೇಶನಾಲಯದ ಜಲಂಧರ್ ಕಚೇರಿಯಲ್ಲಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅಪರಾಧದ ಆದಾಯವನ್ನು ಪತ್ತೆಹಚ್ಚಲು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಇಡಿ ತನಿಖೆಯನ್ನು ಪ್ರಾರಂಭಿಸಿದೆ.
ಮೂಲಗಳ ಪ್ರಕಾರ, ಇಡಿ ಆರಂಭದಲ್ಲಿ 15 ಪ್ರಕರಣಗಳನ್ನು ವಿಶ್ಲೇಷಿಸಿತ್ತು ಮತ್ತು ಗಡೀಪಾರಾದ 11 ಜನರ ವಿವರಗಳು ಮತ್ತು ವಿಳಾಸಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಗಡೀಪಾರು ಮಾಡಿದವರ ದೂರುಗಳ ಆಧಾರದ ಮೇಲೆ ಪಂಜಾಬ್ ಪೊಲೀಸರು ಈವರೆಗೆ ಟ್ರಾವೆಲ್ ಏಜೆಂಟರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದಾಗ್ಯೂ, ಇಡಿ ಇನ್ನೂ ಪೊಲೀಸರಿಂದ ವಿವರಗಳನ್ನು ಅಧಿಕೃತವಾಗಿ ಕೋರಿಲ್ಲ ಎಂದು ಮೂಲಗಳು ತಿಳಿಸಿವೆ.
ಡಂಕಿ ಮಾರ್ಗವು ಅನೇಕ ದೇಶಗಳಲ್ಲಿ ಏಜೆಂಟರು ಮತ್ತು ದಲ್ಲಾಳಿಗಳು ನಿರ್ವಹಿಸುವ ಸುಸಂಘಟಿತ ಜಾಲವಾಗಿದೆ. ಈ ಮಾರ್ಗವು ಅಕ್ರಮ ವಲಸಿಗರಿಗೆ ಮೆಕ್ಸಿಕೊವನ್ನು ತಲುಪಲು ವಾಯು ಮಾರ್ಗಗಳು, ಕಾಡುಗಳು ಮತ್ತು ನದಿಗಳ ಮೂಲಕ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ, ಅಲ್ಲಿಂದ ಅವರು ಯುಎಸ್ಗೆ ದಾಟುತ್ತಾರೆ.