ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕ ಕುರಿತ ವರದಿಯನ್ನು ವಿಧಾನಸಭೆಯಲ್ಲಿ ಜಂಟಿ ಪರಿಶೀಲನಾ ಸಮಿತಿಯ ವರದಿಯನ್ನು ಮಂಡನೆ ಮಾಡಲಾಯಿತು.ಈ ವರದಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕದ ಪರಿಶೀಲನಾ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಮಂಡಿಸಿದರು.
ಗ್ರೇಟರ್ ಬೆಂಗಳೂರು ಎಂದರೇನು?
ಬೆಂಗಳೂರನ್ನು ಏಳು ಭಾಗವಾಗಿ ಅಥವಾ ಇರುವ ಒಂದು ಪಾಲಿಕೆಯನ್ನು 7 ಪಾಲಿಕೆಗಳನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ. ಈ ಬೆಳವಣಿಗೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅನ್ನು ಸರ್ಕಾರ ಪರಿಚಯಿಸಿದೆ. ಇದರ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಲಿದೆ. ಬೆಂಗಳೂರಿಗೆ ಮೂರು ಹಂತದ ಆಡಳಿತ ನೀಡುವುದು ಇದರ ಉದ್ದೇಶವಾಗಿದೆ.
ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಈ ರೀತಿ ಬೆಳೆಯುತ್ತಿರುವ ನಗರಕ್ಕೆ ಒಂದು ಪಾಲಿಕೆ ಸಾಕಗಲ್ಲ ಎಂದು ಕಾಂಗ್ರೆಸ್ ಸರ್ಕಾರ ವಾದ ಮಾಡಿದೆ. ಬೆಂಗಳೂರಿನ ಅಭಿವೃದ್ಧಿ ಹಾಗೂ ಸುಗಮ ಆಡಳಿತಕ್ಕಾಗಿ ಗ್ರೇಟರ್ ಬೆಂಗಳೂರು ವರದಿಯನ್ನು ಸಿದ್ಧಪಡಿಸಲಾಗಿದೆ. ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿಯಿಂದ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಈ ವರದಿಯನ್ನು ಸಲ್ಲಿಸಲಾಗಿದೆ. ಕಳೆದ ಐದು ತಿಂಗಳಿನಿಂದ ಸಭೆಗಳನ್ನು ನಡೆಸಿ ಹಾಗೂ ಅಭಿಪ್ರಾಯ ಸಂಗ್ರಹವಾದ ಮೇಲೆ ಈ ವರದಿಯನ್ನು ಮಂಡನೆ ಮಾಡಲಾಗಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸರಣಿ ಸಭೆಗಳು ನಡೆದಿದ್ದವು. ಗ್ರೇಟರ್ ಬೆಂಗಳೂರು ಬಿಲ್ ಅನ್ನು ಈಚೆಗೆ ರಾಜ್ಯ ಸರ್ಕಾರವು ಪ್ರಸ್ತಾಪಿಸಿತ್ತು. ಸಭೆಗಳ ನಂತರ ವರದಿ ಅಂತಿಮವಾಗಿದ್ದು. ಅಂತಿಮ ವರದಿಯನ್ನು ವಿಧಾನಸಭೆಯಲ್ಲಿ ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಲು ನಿರ್ಧರಿಸಲಾಗಿದೆ. ನಂತರ ಈ ಬಿಲ್ ಮಂಡನೆಯಾಗಲಿದ್ದು, ಅನುಮೋದನೆಯಾದರೆ ಅನುಷ್ಠಾನವಾಗಲಿದೆ. ಆದರೆ, ಇದು ಸುದೀರ್ಘ ಪ್ರಕ್ರಿಯೆಯಾಗಿದೆ.