ವಾಯುವ್ಯ ಪಾಕಿಸ್ತಾನದ ಬನ್ನುವಿನಲ್ಲಿರುವ ಮುಖ್ಯ ಕಂಟೋನ್ಮೆಂಟ್‌ನ ಗಡಿ ಗೋಡೆಗೆ ಸ್ಫೋಟಕಗಳಿಂದ ತುಂಬಿದ್ದ ಎರಡು ವಾಹನಗಳು ಮಂಗಳವಾರ ಡಿಕ್ಕಿ ಹೊಡೆದು ಆತ್ಮಾಹುತಿ ದಾಳಿ ನಡೆಸಿದ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿ, 30 ಜನರು ಗಾಯಗೊಂಡಿದ್ದಾರೆ.
ಸೇನಾ ಸೈನಿಕರು ಕನಿಷ್ಠ ಆರು ಭಯೋತ್ಪಾದಕರನ್ನು ಕೊಂದರು. ಪೇಶಾವರದಿಂದ ನೈಋತ್ಯಕ್ಕೆ ಸುಮಾರು 200 ಕಿ.ಮೀ ದೂರದಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಕಂಟೋನ್ಮೆಂಟ್‌ನ ಗಡಿ ಗೋಡೆಗೆ ಆತ್ಮಹತ್ಯಾ ಬಾಂಬರ್‌ಗಳು ಸಂಜೆ ಡಿಕ್ಕಿ ಹೊಡೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಫೀಜ್ ಗುಲ್ ಬಹದ್ದೂರ್ ಜೊತೆ ಸಂಪರ್ಕ ಹೊಂದಿರುವ ಜೈಶ್ ಅಲ್ ಫರ್ಸಾನ್ ಎಂಬ ಸಂಘಟನೆಯು ಬನ್ನು ದಾಳಿಯ ಹೊಣೆಯನ್ನು ಹೇಳಿಕೆಯಲ್ಲಿ ಹೊತ್ತುಕೊಂಡಿದೆ. ಈ ಗುಂಪು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ಹಲವು ಬಣಗಳಲ್ಲಿ ಒಂದಾಗಿದೆ. ಬನ್ನು ಕಂಟೋನ್ಮೆಂಟ್ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 12 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ಬನ್ನುವಿನ ಡಿಹೆಚ್‌ಕ್ಯು ಹಾಡ್‌ಪಿಟಲ್ ವಕ್ತಾರ ಡಾ. ನುಮನ್ ಹೇಳಿದ್ದಾರೆ, ಮೃತರಲ್ಲಿ ನಾಲ್ವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್ಫ್ಲಿಕ್ಟ್ ಅಂಡ್ ಸೆಕ್ಯುರಿಟಿ ಸ್ಟಡೀಸ್ (PICSS) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜನವರಿ 2025 ರಲ್ಲಿ ದೇಶದಲ್ಲಿ ಭಯೋತ್ಪಾದಕ ದಾಳಿಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡಾ 42 ರಷ್ಟು ಹೆಚ್ಚಾಗಿದೆ. ದೇಶಾದ್ಯಂತ ಕನಿಷ್ಠ 74 ಭಯೋತ್ಪಾದಕ ದಾಳಿಗಳು ದಾಖಲಾಗಿದ್ದು, 35 ಭದ್ರತಾ ಸಿಬ್ಬಂದಿ, 20 ನಾಗರಿಕರು ಮತ್ತು 36 ಭಯೋತ್ಪಾದಕರು ಸೇರಿದಂತೆ 91 ಸಾವುಗಳು ಸಂಭವಿಸಿವೆ ಎಂದು ದತ್ತಾಂಶವು ತೋರಿಸಿದೆ. 53 ಭದ್ರತಾ ಸಿಬ್ಬಂದಿ, 54 ನಾಗರಿಕರು ಮತ್ತು 10 ಉಗ್ರರು ಸೇರಿದಂತೆ 117 ಜನರು ಗಾಯಗೊಂಡಿದ್ದಾರೆ.
ಖೈಬರ್ ಪಖ್ತುನ್ಖ್ವಾ (ಕೆಪಿ) ಪ್ರಾಂತ್ಯವು ಅತಿ ಹೆಚ್ಚು ಹಾನಿಗೊಳಗಾಗಿದ್ದು, ನಂತರದ ಸ್ಥಾನದಲ್ಲಿ ಬಲೂಚಿಸ್ತಾನ್ ಇದೆ. ಕೆಪಿಯ ಜನನಿಬಿಡ ಜಿಲ್ಲೆಗಳಲ್ಲಿ, ಭಯೋತ್ಪಾದಕರು 27 ದಾಳಿಗಳನ್ನು ನಡೆಸಿದ್ದು, 11 ಭದ್ರತಾ ಸಿಬ್ಬಂದಿ, ಆರು ನಾಗರಿಕರು ಮತ್ತು ಇಬ್ಬರು ಭಯೋತ್ಪಾದಕರು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ. ಕೆಪಿ (ಹಿಂದಿನ FATA) ಬುಡಕಟ್ಟು ಜಿಲ್ಲೆಗಳಲ್ಲಿ 19 ದಾಳಿಗಳು ನಡೆದಿವೆ ಎಂದು ದತ್ತಾಂಶವು ತೋರಿಸುತ್ತದೆ, ಇದರ ಪರಿಣಾಮವಾಗಿ 13 ಭದ್ರತಾ ಸಿಬ್ಬಂದಿ, ಎಂಟು ನಾಗರಿಕರು ಮತ್ತು 25 ಉಗ್ರರು ಸೇರಿದಂತೆ 46 ಜನರು ಸಾವನ್ನಪ್ಪಿದ್ದಾರೆ.