ಬೆಂಗಳೂರು : ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಬಂದು ವಿದೇಶಿಗರು ವಾಸಿಸುತ್ತಿದ್ದಾರೆ. ವೀಸಾ ಮುಗಿದರು ಸಹ ವಿದೇಶಕ್ಕೆ ತೆರಳದೆ ಇಲ್ಲಿಯೇ ಇದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿ ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಮನೆ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಿಯರ ಕಾಯ್ದೆ ಪ್ರಕಾರ ವಿದೇಶಿ ಪ್ರಜೆಗಳಿಗೆ ತನ್ನ ಮನೆ ಬಾಡಿಗೆ ನೀಡಿದ 24 ತಾಸಿನೊಳಗೆ ವಿದೇಶಿಯರ ನೋಂದಣಿ ಇಲಾಖೆಯ ಆನ್‌ಲೈನ್ ಪೋರ್ಟಲ್‌ನಲ್ಲಿ ಫಾರಂ-ಸಿ ಅನ್ನು ಅಧಿಕಾರಿಗಳಿಗೆ ಸಲ್ಲಿಸಬೇಕಿದೆ ಎಂದರು.
ಎಫ್‌ಆರ್‌ಓಓ ಅಧಿಕಾರಿಗಳು ಅನುಮೋದಿಸಿದ ಮನೆಯ ಮಾಲೀಕ/ನಿರ್ವಹಕಾರ ವಿದೇಶಿ ವ್ಯಕ್ತಿ ವಾಸ್ತವ್ಯಕ್ಕೆ ಬಂದ 24 ತಾಸಿನಲ್ಲೇ ನಮೂನೆ-ಸಿ ರ ಮುದ್ರಿತ ಪ್ರತಿಗಳನ್ನು ಹೊಂದಿರಬೇಕು ಎಂಬ ನಿಯಮವಿದೆ. ಆದರೆ ಈ ನಿಯಮವನ್ನು ಮನೆ ಮಾಲೀಕರು ಪಾಲಿಸುತ್ತಿಲ್ಲ. ಕಳೆದ ಐದುವರ್ಷಗಳಲ್ಲಿ ವಿದೇಶಿಪ್ರಜೆಗಳಿಗೆ ಕಾನೂನುಬಾಹಿರವಾಗಿ ಮನೆಗಳನ್ನು ಬಾಡಿಗೆ ನೀಡಿದವರ ವಿರುದ್ಧ 70 ಪ್ರಕಣಣಗಳು ದಾಖಲಾಗಿವೆ ಎಂದು ಹೇಳಿದರು.
ಇನ್ನು ಮುಂದೆ ಯಾವುದೇ ವಿದೇಶಿ ಪ್ರಜೆಗಳಿಗೆ ಬಾಡಿಗೆ/ಆಶ್ರಯನೀಡುವ ಮುನ್ನ ಅವರ ಪೂರ್ವಾಪರವಿವರಗಳನ್ನು ಮನೆ ಮಾಲೀಕರು ಸಂಗ್ರಹಿಸಬೇಕು. ಆನಂತರ ಈ ಮಾಹಿತಿಯನ್ನು ನಿಯಮಾನುಸಾರ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನೀಡಬೇಕಿದೆ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.