ಬೆಂಗಳೂರು : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆಯನ್ನು ಖಂಡಿಸಿ, ಇದೇ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಆದರೆ ಇದೇ ವೇಳೆ ರಾಜ್ಯದಲ್ಲಿ 7, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾರ್ಚ್ ತಿಂಗಳಿನಲ್ಲಿ 7 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗಳು ನಡೆಯುತ್ತಿವೆ. ಮಾರ್ಚ್ 22ರಂದು ಕೂಡ ಪರೀಕ್ಷೆ ಇದ್ದು ಕರ್ನಾಟಕ ಬಂದ್ ಮಾಡುವ ಸಲುವಾಗಿ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ಈಗಾಗಲೇ ವೇಳಾಪಟ್ಟಿ ಸಿದ್ಧಪಡಿಸಲಾಗಿದ್ದು ಮಕ್ಕಳ ಹಿತ ದೃಷ್ಟಿಯಿಂದ ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ಮುಂದೂಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು 1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಮಗುವಿಗೆ 6 ವರ್ಷವಾಗಿರಬೇಕು ಎಂಬ ನಿಯಮದಲ್ಲಿ ಯಾವುದೇ ಸಡಿಲಿಕೆ ಸಾಧ್ಯವಿಲ್ಲ.ಅನೇಕರು ಈ ಬಗ್ಗೆ ಕೋರ್ಟ್ ಗೆ ಹೋಗಿದ್ದಾರೆ. ಕೋರ್ಟ್ ಕೂಡ ಅವರ ಅರ್ಜಿ ವಜಾಗೊಳಿಸಿದೆ. ಕೋರ್ಟ್ ತೀರ್ಪು ಏನು ನೀಡಲಿದೆ ಹಾಗೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
6 ವರ್ಷ ತುಂಬಲು ಒಂದು ತಿಂಗಳು, ಎರಡು ತಿಂಗಳು ಕಡಿಮೆಯಿದ್ದರೆ ಒಂದು ಮಗುವಿಗೆ ಅವಕಶ ಕೊಟ್ಟರೆ ಮತ್ತೊಬ್ಬರು ಕೇಳುತ್ತಾರೆ. 1ನೇ ತರಗತಿ ದಾಖಲಾತಿ ಮಾಡಿಕೊಳ್ಳಲು 6 ವರ್ಷವಾಗಿರಬೇಕು ಎಂಬುದು ಕಡ್ಡಾಯ. ನಿಯಮವನ್ನು ನಾವು ಪಾಲಿಸಲೇಬೇಕು. ಈ ವಿಚಾರ ಕೋರ್ಟ್ ನಲ್ಲಿರುವುದರಿಂದ ಕೋರ್ಟ್ ತೀರ್ಮಾನ ಕೈಗೊಂಡಂತೆ ನಾವು ಪಾಲಿಸುತ್ತೇವೆ ಎಂದರು.