ಚಿಕ್ಕಬಳ್ಳಾಪುರ : ರಾಜ್ಯಕ್ಕೂ ಹಕ್ಕಿಜ್ವರ ಕಾಲಿಟ್ಟಿದ್ದು, ಚಿಕ್ಕಬಳ್ಳಾಪುರದಲ್ಲಿ 2 ಕೋಳಿಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಸಾಕಿದ್ದ ನಾಟಿ ಕೋಳಿಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ. ವರದಹಳ್ಳಿ ಗ್ರಾಮದಲ್ಲಿ ದ್ಯಾವಪ್ಪ ಎಂಬುವರಿಗೆ ಸೇರಿದ 28 ಕೋಳಿಗಳು ಹಾಗೂ ರತ್ನಮ್ಮ ಎಂಬುವರಿಗೆ ಸೇರಿದ 5 ಕೋಳಿಗಳು ರಕ್ತ ಭೇದಿ ಮಾಡಿಕೊಂಡು ದಿಢೀರನೇ ಸಾವನ್ನಪ್ಪಿವೆ.
ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಈ ಸತ್ತ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶುಪಾಲನೆ ಹಾಗೂ ಜೈವಿಕ ವಿಜ್ಞಾನ ವಿಭಾಗದ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಎರಡು ಕೋಳಿಗಳಲ್ಲಿ ಹಕ್ಕಿಜ್ವರ H5N1 ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅದೇ ಮಾದರಿಗಳನ್ನು ಭೋಪಾಲ್ ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲೂ ವೈರಸ್ ಇರುವುದು ದೃಢಪಟ್ಟಿದೆ.
ರಾಯಚೂರಲ್ಲು ಕೂಡ ಹಕ್ಕಿ ಜ್ವರ ಹರಡಿರುವ ಶಂಕೆ ವ್ಯಕ್ತವಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಪಕ್ಷಿಗಳ ಸರಣಿ ಸಾವುಗಳಾಗುತ್ತಿವೆ. ಪಾರಿವಾಳ, ಕೊಕ್ಕರೆ, ಕಾಗೆ ಹಾಗು ಸುವರ್ಣ ಪಕ್ಷಿಗಳ ಸಾವುಗಳಾಗುತ್ತಿವೆ.
ಮಾನ್ವಿ ತಾಲೂಕಿನ ಮಕ್ಸೂದ್ ಅಲಿ ತೋಟದಲ್ಲಿ 8 ರಿಂದ 10 ಪಕ್ಷಿಗಳು ಸಾವನ್ನಪ್ಪಿವೆ. ನಾಲ್ಕು ಐದು ದಿನಗಳಿಂದ ತಾಲೂಕಿನ ಹಲವೆಡೆ ಪಕ್ಷಿಗಳ ಸಾವು ಆಗುತ್ತಿರುವುದು ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮಾನ್ವಿ ಸೇರಿದಂತೆ ಹಲವು ಕಡೆ ಹಕ್ಕಿಗಳು ಪಕ್ಷಿಗಳು ಸಾವನ್ನಪುತ್ತಿವೆ. ಈ ವೇಳೆ ಪಶು ವೈದ್ಯ ಬಸವರಾಜ್ ಅವರು ಮಾತನಾಡಿ ಈಗಾಗಲೇ ಸಾವನ್ನಪ್ಪಿದ ಪಕ್ಷಿಗಳ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಹಕ್ಕಿ ಜ್ವರ ಇದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.