ಬೆಂಗಳೂರು : ಇನ್ಮುಂದೆ ಅನುಮತಿಯಿಲ್ಲದೆ ಗೃಹ ಸಚಿವ ಜಿ. ಪರಮೇಶ್ವರ್ ಅವರ ಮನೆಗೆ ಹೋಗಿ ಭೇಟಿಯಾಗಕೂಡದು ಎಂದು ಎಲ್ಲಾ ಹಂತದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಸೂಚಿಸಿದ್ದಾರೆ. ಈ ಸಂಬಂಧ ಮೆಮೊ ಸಹ ಹೊರಡಿಸಲಾಗಿದೆ.
ವರ್ಗಾವಣೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ನಾನಾ ಕಡೆಗಳಿಂದ ಎಲ್ಲಾ ಹಂತದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯು ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡುತ್ತಿದ್ದರು. ದಿನೇ ದಿನೆ ಭೇಟಿಯಾಗುವವರ ಸಂಖ್ಯೆ ಅಧಿಕವಾದ ಹಿನ್ನೆಲೆಯಲ್ಲಿ ಅನುಮತಿಯಿಲ್ಲದೆ ಹೋಮ್ ಮಿನಿಸ್ಟರ್ ಅವರನ್ನು ಖುದ್ದು ಭೇಟಿಯಾಗಬಾರದು ಎಂದು ಡಿಜಿಪಿ ಸೂಚಿಸಿದ್ದಾರೆ.
ನಿರಂತರವಾಗಿ ಕೆಲ ಪೊಲೀಸರು, ಸಿಬ್ಬಂದಿ ವರ್ಗದವರು ಸಚಿವರ ಕಚೇರಿ, ನಿವಾಸಕ್ಕೆ ನೇರವಾಗಿ ಭೇಟಿ ನೀಡುತ್ತಿರುವುದರ ಬಗ್ಗೆ ಸಚಿವರ ಕಚೇರಿಯಿಂದ ಡಿಜಿ ಐಜಿ ಕಚೇರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಈ ವಿಚಾರವಾಗಿ ಅಲೋಕ್ ಮೋಹನ್ ಅವರೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮೆಮೋ ಕಳುಹಿಸಿ ಆದೇಶಿಸಿದ್ದಾರೆ.
ಒಂದು ವೇಳೆ ಭೇಟಿ ಮಾಡಲು ಉದ್ದೇಶಿಸಿದರೆ ಡಿಜಿಪಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರಾಜ್ಯದ ಪೊಲೀಸ್ ಕಮಿಷನರೇಟ್, ಪೊಲೀಸ್ ಇಲಾಖೆಯ ವಿವಿಧ ಘಟಕಗಳ ಮೇಲಾಧಿಕಾರಿಗಳಿಗೆ ಮೆಮೊ ನೀಡಿರುವ ಅಲೋಕ್ ಮೋಹನ್, ಅಧಿಕಾರಿ ಹಾಗೂ ಸಿಬ್ಬಂದಿಗೆ ಅನುಮತಿ ಪಡೆಯದೆ ಸಚಿವರನ್ನು ಭೇಟಿಯಾಗದಂತೆ ಸೂಚಿಸಬೇಕು ಎಂದು ಅದೇಶಿಸಿದ್ದಾರೆ.