ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಹೈದರ್ ಅಲಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ 7 ಆರೋಪಿಗಳಿಗೆ ಮಾರ್ಚ್ 11 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 29ನೇ ACMM ಕೋರ್ಟ್ ಆದೇಶ ಹೊರಡಿಸಿದೆ.
ಹೌದು ಹೈದರ್ ಅಲಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಅಶೋಕನಗರ ಠಾಣೆಯ ಪೊಲೀಸರು 7 ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು.ಹಳೇ ದ್ವೇಷದ ಹಿನ್ನೆಲೆಯಲ್ಲಿ ಹೈದರ್ ಅಲಿಯನ್ನು ಹತ್ಯೆ ಮಾಡಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನ ನಯಾಜ್ ಪಷಾ ಅಲಿಯಾಸ್ ನಾಜುದ್ದೀನ್, ರಿಜ್ವಾನ್, ಸದ್ದಾಂ, ಮತೀನ್, ದರ್ಶನ್, ರಾಹಿದ್, ವಸೀಂ ಎನ್ನಲಾಗಿದ್ದು, ಬಂಧಿತ ಸದ್ದಾಂ, ರಾಹಿದ್, ವಾಸಿಂ, ರಿಜ್ವಾನ್ ವಿರುದ್ಧ ಶಿವಮೊಗ್ಗ ಜಿಲೆಯ ವಿವಿಧ ಠಾಣೆಗಳಲ್ಲಿ ರೌಡಿಶೀಟ್ ಇದೆ. ಕೊಲೆಯಾದ ಹೈದರ್ ಹಾಗೂ ಆರೋಪಿ ನಯಾಜ್ ನಡುವೆ 10 ವರ್ಷಗಳ ದ್ವೇಷವಿತ್ತು ಎಂದು ತಿಳಿದುಬಂದಿದೆ.
ಪ್ರಕರಣ ಹಿನ್ನೆಲೆ…
ಬಿಬಿಎಂಪಿ ಚುನಾವಣೆಗಾಗಿ ಹೈದರ್ ಅಲಿಯ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಮೊನ್ನೆ ರಾತ್ರಿ ಶಾಂತಿ ನಗರ ಕಾಂಗ್ರೆಸ್ ಲೀಡರ್ ಜೊತೆಗೆ ರೌಡಿ ಶೀಟರ್ ಆಗಿದ್ದ ಹೈದರ್ ಅಲಿಯ ಬರ್ಬರ ಕೊಲೆ ಆಗಿತ್ತು. ಇದೀಗ ಕೊಲೆ ಹಿಂದೆ ಕೈ ನಾಯಕರ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ.
ಕಳೆದ ಫೆ.22 ರಂದು ಮಧ್ಯರಾತ್ರಿ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಬಾಲ್ ಗ್ರೌಂಡ್ ಬಳಿ ಕಾಂಗ್ರೆಸ್ ಮುಖಂಡ ಹೈದರ್ ಅಲಿ ಕೊಲೆ ನಡೆದಿತ್ತು. ಶಾಂತಿನಗರ ಶಾಸಕ ಹ್ಯಾರಿಸ್ ಆಪ್ತನಾಗಿದ್ದ ಹೈದರ್ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡನಾಗಿದ್ದರು. ಬಿಬಿಎಂಪಿ ಚುನಾವಣೆ ನಡೆಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಬೆನ್ನಲ್ಲೆ ಕೈ ಕಲಿಗಳು ಕಸರತ್ತು ಆರಂಭಿಸಿದ್ದರು.
ಈ ಬಾರಿ ಬಿಬಿಎಂಪಿ ಚುನಾವಣೆಗೆ ಹೈದರ್ ಸಹೋದರ ಸಲೀಮ್‌ಗೆ ಟಿಕೆಟ್ ಖಚಿತ ಎಂದು ಏರಿಯಾದಲ್ಲಿ ಚರ್ಚೆ ಆಗುತ್ತಿತ್ತಂತೆ. ಈ ವಿಚಾರ ಕೆಲ ಕಾಂಗ್ರೆಸ್ ಮುಖಂಡರಿಗೆ ನುಂಗಲಾಗದ ತುತ್ತಾಗಿದೆ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶಾಸಕ ಹ್ಯಾರಿಸ್ ಹಾಗೂ ಪುತ್ರ ನಲಪಾಡ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಿಂದಲೇ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.