ಬೆಂಗಳೂರು: ನೀವು ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದು, ಈಗ ಇಶಾ ಫೌಂಡೇಶನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರಿಂದ ಇಂತಹ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ನಾನು ಜನ್ಮತಃ ಹಿಂದು. ಹಿಂದೂವಾಗಿಯೇ ಸಾಯುತ್ತೇನೆ. ನಾನು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ನಾನು ಜೈಲಲ್ಲಿ ಇದ್ದಾಗ ಸಿಖ್ ಧರ್ಮದ ಬಗ್ಗೆ ಕಲಿತೆ. ಜೈನರ ಮಠದ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲಾ ಧರ್ಮದವರು ನನಗೆ ಆಶೀರ್ವಾದ ಮಾಡುತ್ತಾರೆ. ನಾನು ದರ್ಗಾ, ಚರ್ಚ್ ಗೆ ಹೋಗುತ್ತೇನೆ. ಎಲ್ಲಾ ಸಮುದಾಯಗಳು ನನ್ನನ್ನು ಪ್ರೀತಿಸುತ್ತವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಮಹಾಕುಂಭ ಮೇಳದಲ್ಲಿ ನಿಮ್ಮ ಅನುಭವ ಹೇಗಿತ್ತು ಎಂದು ಕೇಳಿದಾಗ, “ನನ್ನ ಅನುಭವ ಅತ್ಯುತ್ತಮವಾಗಿತ್ತು. ಮಹಾಕುಂಭಮೇಳದ ಆಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಸಾಮಾನ್ಯದ ಕೆಲಸವಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ನಿಭಾಯಿಸುವುದು ಸುಲಭವಲ್ಲ. ಒಂದೆರಡು ಸಣ್ಣಪುಟ್ಟ ತೊಂದರೆಗಳು ಆಗಿರಬಹುದು. ತಪ್ಪು ಹುಡುಕಲು ಹೋಗುವುದಿಲ್ಲ. ಧರ್ಮದಲ್ಲಿ ಭಕ್ತ ಹಾಗೂ ಭಗವಂತನ ನಡುವೆ ಸಂಬಂಧವಿರುತ್ತದೆ. ಕೆಲವರು ದೇವರ ಜತೆ ನೇರವಾಗಿ ವ್ಯವಹಾರ ನಡೆಸಿದರೆ ಮತ್ತೆ ಕೆಲವರು ಅರ್ಚಕರ ಮೂಲಕ ವ್ಯವಹಾರ ಮಾಡುತ್ತಾರೆ” ಎಂದು ತಿಳಿಸಿದರು.
ಶಶಿತರೂರ್ ಅವರು ಬಿಜೆಪಿಗೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನೀವು ಬಿಜೆಪಿಗೆ ಹತ್ತಿರವಾಗುತ್ತಿದ್ದೀರಿ ಎಂಬ ಚರ್ಚೆ ಆರಂಭವಾಗಿದೆ, “ಕಾಂಗ್ರೆಸ್ ಪಕ್ಷ ಶ್ರೇಷ್ಠವಾದ ಪಕ್ಷ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷದ ತತ್ವ, ಸಂಸ್ಕೃತಿಯೇ ಬೇರೆ. ಕೆಲವರು ಆತುರದಲ್ಲಿ ನಿರ್ಧಾರ ಕೈಗೊಳ್ಳಬಹುದು. ಪಕ್ಷಕ್ಕೆ ಏನು ಆಗುವುದಿಲ್ಲ. ನೂರು ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ. ಶಶಿ ತರೂರ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದು, ಅವರು ಕಾಂಗ್ರೆಸ್ ಪಕ್ಷದ ಆಸ್ತಿ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ. ನನ್ನನ್ನು ಇನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂಬುದಷ್ಟೇ ಅವರ ಬೇಡಿಕೆ. ಅದರ ಹೊರತಾಗಿ ಬೇರೇನೂ ಇಲ್ಲ” ಎಂದು ತಿಳಿಸಿದರು.
BIG NEWS : ಫೆ.28ರಿಂದ 3 ದಿನ `ಹಂಪಿ ಉತ್ಸವ’ : CM ಸಿದ್ದರಾಮಯ್ಯ ಚಾಲನೆ.!
BREAKING : ಮೈಸೂರಲ್ಲಿ ಮತ್ತೊಂದು ಅಗ್ನಿ ದುರಂತ : ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ 12 ಬಾಯ್ಲರ್ ಗಳು!