ಬೆಂಗಳೂರು : ರಾಜ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಅದರಲ್ಲೂ ಮಹಿಳೆಯರಿಗೆ ಎಂದೆ ಶಕ್ತಿ ಯೋಜನೆ ಜಾರಿ ಮಾಡಿದ್ದು, ಈ ಒಂದು ಶಕ್ತಿ ಯೋಜನೆಯಿಂದ ಈಗಾಗಲೇ ರಾಜ್ಯದ ಎಲ್ಲಾ ಮಹಿಳೆಯರು ಸದುಪಯೋಗ ಪಡೆದುಕೊಂಡಿದ್ದಾರೆ. ಇದೆ ಯೋಜನೆ ಅಡಿಯಲ್ಲಿ ಇದೀಗ ರಾಜ್ಯ ಸರ್ಕಾರ ಮತ್ತೊಂದು ಚಿಂತನೆ ನಡೆಸಿದ್ದು, ಡಯಾಲಿಸಿಸ್ ಇರುವ ಪುರುಷರಿಗೂ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಹೌದು ರಾಜ್ಯದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ಡಯಾಲಿಸಿಸ್‌ಗಾಗಿ ವಾರಕ್ಕೊಮ್ಮೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೆ ಹೋಗಬೇಕಿದೆ. ಹೀಗಾಗಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪುರುಷರಿಗೂ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಿತ್ಯ ಪುರುಷರು ಸಾರಿಗೆ ಬಸ್ ಬಳಕೆ ಮಾಡುತ್ತಾರೆ. ಇದರಲ್ಲಿ ಅನೇಕ ಕಾಯಿಲೆ ಇರುವ ಪುರುಷ ಪ್ರಯಾಣಿಕರು ಕೂಡ ಸಂಚಾರ ಮಾಡುತ್ತಾರೆ. ಈ ಪೈಕಿ ಡಯಾಲಿಸಿಸ್‌ಗೆ ಒಳಗಾಗಿರುವ ಪುರುಷ ಪ್ರಯಾಣಿಕರನ್ನು ಶಕ್ತಿ ಯೋಜನೆಗೆ ತರುವಂತೆ ಮನವಿ ಮಾಡಲಾಗಿದೆ.ವಾರಕ್ಕೆ 2-3 ಬಾರಿ ಡಯಾಲಿಸಿಸ್‌ಗೆ ಪುರುಷ ರೋಗಿಗಳು ಸಂಚಾರ ಮಾಡುವುದರಿಂದ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಅಂತಹವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಶಕ್ತಿ ಯೋಜನೆ ವ್ಯಾಪ್ತಿಗೆ ತರಬೇಕೆಂದು ಒತ್ತಾಯ ಕೇಳಿಬಂದಿದೆ.
ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ರಾಜ್ಯ ನಗರ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬದ ರೋಗಿಗಳಿಗೆ ಉಚಿತ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಮೂಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಚಿಕಿತ್ಸೆಗೆ ಅನುಕೂಲ ಮಾಡಿಕೊಡಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಜೊತೆಗೆ, ಸಾಮಾಜಿಕ ಕಾರ್ಯಕರ್ತ ಸೈಯದ್ ಮೆಹೀಬುರ್ ರೆಹಮಾನ್ ಸಮೀನ್ ನೀಡಿರುವ ಮನವಿಯನ್ನು ತಮ್ಮ ಅವಗಾಹನೆಗಾಗಿ ಲಗತ್ತಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಷರೀಫ್ ಮನವಿ ಮಾಡಿದ್ದಾರೆ.