ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಆನೆ ಹಾಗೂ ಮಾನವ ಸಂಘರ್ಷಗಳಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಈ ಒಂದು ಆನೆ ಮಾನವ ಸಂಘರ್ಷ ತಡೆಗೆ ರಾಜ್ಯ ಸರ್ಕಾರ ಹೊಸ ಕ್ರಮ ಕೈಗೊಂಡಿದ್ದು, ಆನೆ ಮತ್ತು ಮಾನವ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಮತ್ತೊಂದು ಪ್ರಯತ್ನ ನಡೆಸಿದ್ದು, ಭದ್ರಾ ಅಭಯಾರಣ್ಯದಲ್ಲಿ ‘ಆನೆ ಧಾಮ’ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಹೌದು ಕೊಡಗು, ಹಾಸನ, ಚಿಕ್ಕಮಗಳೂರು ಸುತ್ತಮುತ್ತ ಕಾಡಿನಿಂದ ಹೊರಬಂದು ಗುಂಪಾಗಿ ಸಂಚರಿಸುವ ಕೆಲವು ಆನೆಗಳಿಂದ ಸಮಸ್ಯೆ ತಲೆದೋರಿದೆ. ಕಾಡಿನ ಹೊರಗಡೆಯೇ ಓಡಾಡುತ್ತಾ ತೊಂದರೆ ನೀಡುವ ಸುಮಾರು 150ಕ್ಕೂ ಹೆಚ್ಚು ಪುಂಡಾನೆಗಳನ್ನು ಅರಣ್ಯ ಇಲಾಖೆ ಗುರುತಿಸಿದೆ. ಇಂತಹ ಆನೆಗಳನ್ನು ಖೆಡ್ಡಾಕ್ಕೆ ಕೆಡವಿ ನಂತರ ಅವುಗಳನ್ನು ಆನೆಗಳ ಧಾಮದಲ್ಲಿ ಬಿಡುವ ಯೋಜನೆಯನ್ನ ಅರಣ್ಯ ಇಲಾಖೆ ರೂಪಿಸಿದ್ದು, ಇದು ಕಾರ್ಯಗತಗೊಳ್ಳಲು ಕಾಲಾವಕಾಶ ಬೇಕಾಗುತ್ತದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಭದ್ರಾ ಅಭಯಾರಣ್ಯದ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಆನೆ ಧಾಮ ನಿರ್ಮಿಸಲಾಗುತ್ತದೆ. ಆನೆಗಳಿಗೆ ಇಲ್ಲಿ ಅಗತ್ಯ ಆಹಾರ, ನೀರು ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ.ದೇಶದಲ್ಲಿಯೇ ಅತಿ ಹೆಚ್ಚು 6395 ಆನೆಗಳು ರಾಜ್ಯದಲ್ಲಿವೆ. ಸರ್ಕಾರವು ಪುಂಡಾನೆಗಳ ಹಾವಳಿ ತಡೆಗೆ ಮಾರ್ಗೋಪಾಯ ಕಂಡುಹಿಡಿಯಲು ನೆರೆ ರಾಜ್ಯಗಳ ಸಚಿವರೊಂದಿಗೆ ಸಭೆ ನಡೆಸಿದೆ. ಅಂತಾರಾಷ್ಟ್ರೀಯ ಸಮಾವೇಶ ನಡೆಸಿದೆ. ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸುತ್ತಿದೆ ಎಂದರು.