ಬೆಂಗಳೂರು : ಪ್ರೀತಿ ನಿರಾಕರಿಸಿದ ಯುವತಿಯ ಮೇಲಿನ ಸಿಟ್ಟಿಗೆ ಆಕೆಯ ಮನೆಯಲ್ಲಿದ್ದ ಕಾರು, ದ್ವಿಚಕ್ರ ವಾಹನಗಳಿಗೆ ಬೆಂಕಿಯಿಟ್ಟಿದ್ದ ರೌಡಿಶೀಟರ್ ಹಾಗೂ ಆತನ ಸಹಚರರನ್ನು ಸಿಸಿಬಿಯ ಪೂರ್ವ ವಿಭಾಗದ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೌದು ಪ್ರೀತಿ ನಿರಾಕರಿಸಿದ್ದಾಳೆ ಎಂದು ಯುವತಿಯ ತಂದೆಗೆ ಸೇರಿದ ಕಾರಿಗೆ ಬೆಂಕಿ ಇಟ್ಟು ರೌಡಿಶೀಟರ್ ರಾಹುಲ್ ಹುಚ್ಚಾಟ ಮೆರೆದಿದ್ದ ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಕಾರಿಗೆ ಬೆಂಕಿ ಇಡೋಕು ಮುಂಚೆ ಯುವತಿಯ ಸಾಕು ತಂದೆಗೆ ರೌಡಿಶೀಟರ್ ರಾಹುಲ್ ಚಾಕು ಇರಿದು ಬಳಿಕ ಕಾರಿಗೆ ಬೆಂಕಿ ಹಚ್ಚಿದ್ದ. ಇದೀಗ ರಾಹುಲ್ ಮತ್ತು ಆತನ ಸಹಚರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಕರಣ ಹಿನ್ನೆಲೆ
9 ವರ್ಷಗಳಿಂದ ಯುವತಿಯೊಬ್ಬಳನ್ನು ರಾಹುಲ್ ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ರಾಹುಲ್ನ ಸಂಪರ್ಕದಿಂದ ದೂರ ಉಳಿದಿದ್ದ ಯುವತಿ ಆತನನ್ನು ನಿರ್ಲಕ್ಷ್ಯಿಸಲಾರಂಭಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಶನಿವಾರ ರಾತ್ರಿ ತನ್ನ ಸಹಚರರೊಂದಿಗೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ಯುವತಿಯ ಮನೆ ಬಳಿ ಬಂದು ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟಿದ್ದ.
ಸುಬ್ರಹ್ಮಣ್ಯಪುರ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿರುವ ಯುವತಿಯ ಮತ್ತೊಂದು ಮನೆ ಬಳಿ ತೆರಳಿದ್ದ ರಾಹುಲ್ ಮತ್ತವನ ಸಹಚರರು, ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಗಾರ್ಡ್ ಬೆದರಿಸಿ ಯುವತಿಯ ಮನೆಯವರ ಕಾರುಗಳ ಬಗ್ಗೆ ತಿಳಿದುಕೊಂಡು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಒಟ್ಟು 2 ಕಾರು, ದ್ವಿಚಕ್ರ ವಾಹನ ಬೆಂಕಿಗಾಹುತಿಯಾಗಿದ್ದವು.