ಬೆಳಗಾವಿ: ಕನ್ನಡಿಗರ ಮೇಲೆ ಮರಾಠಿ ಭಾಷಿಕರ ಪುಂಡಾಟಕ್ಕೆ ಕಡಿವಾಣ ಹಾಕಬೇಕಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮರಾಠಿ ಪ್ರೇಮ ಮೆರೆಯಲು ಮುಂದಾಗಿದ್ದು ಸದ್ಯ ಇವರ ನಡೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಮರಾಠಿಗರ ಬಹುದಿನಗಳ ಬೇಡಿಕೆ ಯಾಗಿದ್ದ ಮರಾಠಿ ಭಾಷಿಕ ಪ್ರದೇಶದಲ್ಲಿ ಮರಾಠಿ ಭಾಷೆಯಲ್ಲೇ ದಾಖಲೆ ನೀಡಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮುಂದಾಗಿದ್ದಾರೆ.
ಸದ್ಯ ಇವರ ನಡೆಗೆ ಕನ್ನಡಪರ ಸಂಘಟನೆ ಸದಸ್ಯರು ಸೇರಿದಂತೆ ಗಡಿ ಭಾಗದ ಕನ್ನಡಿಗರು ಜಿಲ್ಲಾಧಿಕಾರಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಎಂಇಎಸ್ ಮುಖಂಡರ ಜತೆ ರಾಷ್ಟ್ರೀಯ ಖ್ಯಾತರ ಆಯೋಗದ ಸದಸ್ಯರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮರಾಠಿ ಭಾಷೆಯಲ್ಲೇ ದಾಖಲೆ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಸಮ್ಮತಿ ಸೂಚಿಸಿದ್ದಾರೆ ಎಂದು ಮರಾಠಿ ದಿನಪತ್ರಿಕೆಗಳಲ್ಲಿ ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿ, ಮರಾಠಿ ಭಾಷೆಯಲ್ಲಿ ದಾಖಲೆ ನೀಡುವ ಅಧಿಕಾರ ಕೇವಲ ಸಚಿವ ಸಂಪುಟ ನಿರ್ಧಾರದಿಂದ ಆಗಬೇಕು. ಆದರೆ ಜಿಲ್ಲಾಧಿಕಾರಿ ನನಗೆ ಅಧಿಕಾರ ಇದೆ ಎಂದು ಹೇಳುತ್ತಿದ್ದಾರೆ. ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗದ ಮನವಿಗೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಸ್ಪಂದಿಸಬಾರದು ಎಂದು ಹೇಳಿದರು.