ಅಯೋಧ್ಯೆ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಪ್ರಯಾಗ್ ರಾಜ್ ಗೆ ಈವರೆಗೆ ಸುಮಾರು 60 ಕೋಟಿ ಯಾತ್ರಾರ್ಥಿಗಳು ಭೇಟಿ ನೀಡಿದ್ದು, ಶನಿವಾರ 1.1 ಕೋಟಿ ಯಾತ್ರಾರ್ಥಿಗಳು ಸ್ನಾನ ಮಾಡಿದ್ದಾರೆ.
ಫೆಬ್ರವರಿ 26 ರಂದು ಮಹಾ ಶಿವರಾತ್ರಿ ಸ್ನಾನದವರೆಗೆ ಸುಮಾರು 65 ಕೋಟಿ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡಲಿದ್ದಾರೆ, ಇದು ದೇಶದ ಇತಿಹಾಸದಲ್ಲಿ ಅತಿದೊಡ್ಡ ಕುಂಭ ಮೇಳವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 13 ರಂದು ಪ್ರಾರಂಭವಾದ ಕುಂಭ ಮೇಳವು ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಫೆಬ್ರವರಿ 26 ರವರೆಗೆ ಮುಂದುವರಿಯುತ್ತದೆ.
ಯುಪಿ ಸರ್ಕಾರದ ಹೇಳಿಕೆಯ ಪ್ರಕಾರ,ನೇಪಾಳದ 50 ಲಕ್ಷಕ್ಕೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.
ಮೌನಿ ಅಮಾವಾಸ್ಯೆಯಂದು ಅತಿ ಹೆಚ್ಚು , ಸುಮಾರು 8 ಕೋಟಿ ಭಕ್ತರು ಪವಿತ್ರ ಸ್ನಾನದಲ್ಲಿ ಭಾಗವಹಿಸಿದ್ದರು ಮತ್ತು ಮಕರ ಸಂಕ್ರಾಂತಿಯಂದು ಸುಮಾರು 3.5 ಕೋಟಿ ಭಕ್ತರು ಅಮೃತ ಸ್ನಾನದ ಸಮಯದಲ್ಲಿ ಸ್ನಾನ ಮಾಡಿದರು.
ಕೇಂದ್ರ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಮತ್ತೊಮ್ಮೆ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿದರು. ಇಬ್ಬರೂ ನಾಯಕರು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದರು.
ತ್ರಿವೇಣಿ ಸಂಗಮದಲ್ಲಿ ಈ ಇಬ್ಬರು ಪ್ರಮುಖ ನಾಯಕರ ಪವಿತ್ರ ಸ್ನಾನವು ಮಹಾ ಕುಂಭದಲ್ಲಿ ಹಾಜರಿದ್ದ ಭಕ್ತರಲ್ಲಿ ಆಕರ್ಷಣೆಯ ಕೇಂದ್ರವಾಯಿತು.