ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಅದರಲ್ಲಿ ಶಕ್ತಿ ಯೋಜನೆ ಕೂಡ ಒಂದು. ಆರಂಭದಲ್ಲಿ ಈ ಒಂದು ಶಕ್ತಿ ಯೋಜನೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ರಾಜ್ಯದ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಯೋಜನೆ ಜಾರಿ ಆದಾಗಿನಿಂದ ಇಂದಿನವರೆಗೂ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುವ ಸಂಖ್ಯೆ ಕಡಿಮೆಯಾಗಿಲ್ಲ. ಇದೀಗ ಕೆಎಸ್ಆರ್ಟಿಸಿಯ ಮೈಸೂರು ವಿಭಾಗ ಪುರುಷರಿಗೆ ಸೀಟ್ ಬಿಟ್ಟು ಕೊಡಿ ಎಂದು ಅಧಿಕೃತ ಆದೇಶ ಹೊರಡಿಸಿದೆ.
ಹೌದು ಈ ಕುರಿತು KSRTC ಮೈಸೂರು ವಿಭಾಗ ನಗರ ಸಾರಿಗೆ ವಾಹನಗಳಲ್ಲಿನ ಮರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳಾ ಪ್ರಯಾಣಿಕರು ಕುಳಿತುಕೊಳ್ಳುತ್ತಿದ್ದು, ಪುರುಷ ಪ್ರಯಾಣಿಕರಿಗೆ ಆಸನಗಳು ಸಿಗುವುದಿಲ್ಲವೆಂದು ಶ್ರೀ ವಿಷ್ಣುವರ್ಧನ.ಎಸ್ ಎಂಬವರು ಕೇಂದ್ರ ಕಚೇರಿಗೆ ಉಲ್ಲೇಖದಂತೆ ದೂರು ಸಲ್ಲಿಸಿರುವುದು ಸರಿಯಷ್ಟೆ.
ಅದರಂತೆ ತಮ್ಮ ಘಟಕಗಳಿಂದ ಕಾರ್ಯಾಚರಣೆಯಾಗುವ ಎಲ್ಲಾ ವಾಹನಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿಸಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಲು ಕ್ರಮಕೈಗೊಳ್ಳುವಂತೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ ಹಾಗೂ ತೆಗೆದುಕೊಂಡ ಕ್ರಮದ ಉರಿತು ಅನುಸರಣಾ ವರದಿ ಕಳುಹಿಸಬೇಕು ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳಾ ಪ್ರಯಾಣಿಕರೇ ಹೆಚ್ಚು ಇರುವ ಕಾರಣ ಪುರುಷ ಪ್ರಯಾಣಿಕರಿಗೆ ಸೀಟು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಪುರುಷ ಪ್ರಯಾಣಿಕರಿಗೆ ಮೀಸಲಿರುವ ಸೀಟುಗಳನ್ನು ಅವರಿಗೆ ಬಿಟ್ಟುಕೊಡಬೇಕು. ಈ ಬಗ್ಗೆ ಗಮನ ಹರಿಸಬೇಕು ಎಂದು ಕೆಎಸ್ಆರ್ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕರು ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ಆದೇಶ ಹೊರಡಿಸಿರುವುದು ಈಗ ಬೆಳಕಿಗೆ ಬಂದಿದೆ.