ಬೆಂಗಳೂರು : ಕರ್ನಾಟಕ ಸರ್ಕಾರ ಘೋಷಿಸಿರುವ ಹೊಸ ಕೈಗಾರಿಕಾ ನೀತಿಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದ್ದು, ₹7.5 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ 30ಕ್ಕೂ ಹೆಚ್ಚು ಇಲಾಖೆಗಳ ಮೂಲಕ 150ಕ್ಕೂ ಹೆಚ್ಚಿನ ವ್ಯಾಪಾರ ವೇದಿಕೆ ಸೃಷ್ಟಿಗೊಳ್ಳಲಿದ್ದು ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಏಕ ಗವಾಕ್ಷಿ ಸೇವೆಯನ್ನು ಪರಿಚಯಿಸಲಾಗುವುದು.
ನವೋದ್ಯಮಗಳ ಸ್ಥಾಪನೆಯಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿಯೇ ಅತ್ಯುನ್ನತ ಸ್ಥಾನದಲ್ಲಿದ್ದು, ಜೈವಿಕ ತಂತ್ತಜ್ಞಾನ, ನಾವೀನ್ಯತೆ, ಎಂಜನಿಯರಿಂಗ್, ಗೆಫೆಕ್ಸ್, ಹೆಲ್ತ್‌ಕೇರ್ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕ ಮುಂದಿದೆ. ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕದಲ್ಲಿ ಎಲ್ಲಾ ಅನುಕೂಲತೆಗಳೂ ಇದ್ದು, ಉದ್ದಿಮೆಗಳ ಸ್ಥಾಪನೆಗೆ ರಾಜ್ಯ ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಮಾಡುತ್ತದೆ. ನಮ್ಮಲ್ಲಿ ಸಂಪನ್ಮೂಲಗಳು ಮಾತ್ರವಲ್ಲದೆ, ಕೌಶಲ್ಯವೂ ಸೇರಿ ಹೂಡಿಕೆದಾರರಿಗೆ ಉತ್ತಮ ವಾತಾವರಣ ಕಲ್ಪಿಸುತ್ತದೆ ಎಂದು ಹೇಳಿದ್ದಾರೆ.