ಬೆಂಗಳೂರು : ಸ್ವಪಕ್ಷದ ನಾಯಕರ ವಿರುದ್ಧವೆ ಅಪಸ್ವರ ಎತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಇದೀಗ ಕೇಂದ್ರ ಬಿಜೆಪಿಯ ಶಿಸ್ತು ಸಮೀತಿ ಶೋಕಾಸ್ ನೋಟಿಸ್ ನೀಡಿದ್ದು, 72 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.ಅಕಸ್ಮಾತ್ ಉತ್ತರಿಸದಿದ್ದರೆ ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆಯೂ ಯತ್ನಾಳ್ಗೆ ಶಿಸ್ತು ಸಮಿತಿ ನೋಟೀಸ್ ನೀಡಿತ್ತು. ಆಗ ಅವರು ನೀಡಿದ್ದ ಉತ್ತರ ತೃಪ್ತಿಕರವಾಗಿಲ್ಲ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ತಮ್ಮ ನಡವಳಿಕೆಯನ್ನು ತಿದ್ದುಕೊಳ್ಳುವುದಾಗಿ ಹೇಳಿದ್ದ ಯತ್ನಾಳ್, ಎಂದಿನಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು.
ಇದೀಗ ಯತ್ನಾಳ್ ನೋಟೀಸ್ಗೆ ಯಾವ ಉತ್ತರ ನೀಡಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಎಂದಿನಂತೆ ಅವರು ಅದೇ ವಿಜಯೇಂದ್ರ, ಯಡಿಯೂರಪ್ಪ, ಕುಟುಂಬ ರಾಜಕಾರಣ, ಹೊಂದಾಣಿಕೆ ಮತ್ತಿತರ ಕ್ಷಣಿಕ ಕಾರಣಗಳನ್ನು ನೀಡಿದರೆ, ಶಿಸ್ತು ಸಮಿತಿ ಸಹಿಸುವುದಿಲ್ಲ. ಬದಲಾಗಿ ಮುಲಾಜಿಲ್ಲದೆ, ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಾಗಾಗಿ ಶೋಕಾಸ್ ನೋಟಿಸ್ ಗೆ ಮೂರು ದಿನದೊಳಗೆ ಉತ್ತರಿಸುವಂತೆ ಯತ್ನಾಳ್ಗೆ ಕೇಂದ್ರ ಚುನಾವಣಾ ಶಿಸ್ತು ಸಮಿತಿ ಸೂಚನೆ ನೀಡಿದೆ. ಒಂದು ವೇಳೆ ಅವರು ನೀಡುವ ಉತ್ತರ ತೃಪ್ತಿಕರವಾಗದಿದ್ದರೆ, ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಸಂಭವವಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.