ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇ ಸುರಕ್ಷತಾ ಬೇಸಿಕ್ ಸ್ಟ್ರಿಪ್ ಮತ್ತು ರನ್ ವೇ ಎಂಡ್ ಸೇಫ್ಟಿ ಏರಿಯಾಕ್ಕೆ ಅಗತ್ಯವಿರುವ 32.97 ಎಕರೆ ಹೆಚ್ಚುವರಿ ಭೂಮಿಯನ್ನು ಹಸ್ತಾಂತರಿಸಲು ರಾಜ್ಯ ಸರ್ಕಾರ ಒಪ್ಪಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಶನಿವಾರ ತಿಳಿಸಿದೆ.
ಲೋಕಸಭೆಯಲ್ಲಿ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ಉತ್ತಮ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಎಂಎಐಎಲ್) ಗೆ ಎಂಐಎ ಗುತ್ತಿಗೆ ನೀಡಿದೆ ಎಂದು ಹೇಳಿದರು.
ರನ್ ವೇ ಸೇಫ್ಟಿ ಬೇಸಿಕ್ ಸ್ಟ್ರಿಪ್ ಮತ್ತು ರನ್ ವೇ ಎಂಡ್ ಸೇಫ್ಟಿ ಏರಿಯಾಕ್ಕೆ ಹೆಚ್ಚುವರಿಯಾಗಿ 32.97 ಎಕರೆ ಭೂಮಿ ಅಗತ್ಯವಿದೆ ಎಂದು ಎಂಎಐಎಲ್ ಅಂದಾಜಿಸಿತ್ತು. “ಭೂಮಿಯನ್ನು ಎಎಐಗೆ ಉಚಿತವಾಗಿ ಹಸ್ತಾಂತರಿಸುವ ಎಂಒಸಿಎ ಮನವಿಗೆ ಕರ್ನಾಟಕ ಸರ್ಕಾರ ಸ್ಪಂದಿಸದಿದ್ದಾಗ, ವಿಮಾನ ನಿಲ್ದಾಣದ ಕಾರ್ಯಾಚರಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್ಎ) ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ವಿಷಯವನ್ನು ಪರಿಹರಿಸಲು ಎಎಐಗೆ ತಿಳಿಸಲಾಯಿತು. ” ಎಂದು ಸಚಿವರು ಹೇಳಿದರು.