ಮೈಸೂರು : ಮುಡಾ ಕೇಸಲ್ಲಿ ಇಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, CBI ತನಿಖೆಗೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ವಿಚಾರವಾಗಿ ಮುಡಾ ಕೇಸ್ ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತ ಸಿದ್ಧತೆ ಮಾಡಿಕೊಂಡಿದೆ.
ಹೌದು ಎರಡು ಮೂರು ದಿನಗಳಲ್ಲಿ ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ವರದಿ ಸಲ್ಲಿಕೆ ಆಗಲಿದೆ. ಅಂತಿಮ ವರದಿ ಸಲ್ಲಿಸಲಿರುವ ಮೈಸೂರು ಲೋಕಾಯುಕ್ತ ಎಸ್ ಪಿ ಟಿ.ಉದೇಶ ಪರಿಶೀಲನೆ ಮಾಡಿದ ಬಳಿಕ ಲೋಕಾಯುಕ್ತ ಐಜಿಪಿಗೆ ವರದಿ ಸಲ್ಲಿಸಲಾಗುತ್ತದೆ. ಐಜಿಪಿ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಗೆ ಲೋಕಾಯುಕ್ತ ಎಸ್ ಪಿ ವರದಿ ಸಲ್ಲಿಸಲಿದ್ದಾರೆ.
ಬಳಿಕ ಲೋಕಾಯುಕ್ತ ಎಡಿಜಿಪಿಗೆ ವರದಿಯನ್ನು ಐಜಿಪಿ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಅವರು ಸಲ್ಲಿಸಲಿದ್ದಾರೆ. ಅಂತಿಮ ವರದಿ ಸಿದ್ದಪಡಿಸಿದ ಬಳಿಕ ಕಾನೂನು ತಜ್ಞರಿಂದ ಸಲಹೆ ಪಡೆಯಲಿದ್ದಾರೆ. ನಂತರ ಕಾನೂನು ತಜ್ಞರ ಅಭಿಪ್ರಾಯದ ಬಳಿಕ ಕೋರ್ಟಿಗೆ ವರದಿ ಸಲ್ಲಿಕೆ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.