ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS) ಸೆನೆಟ್ ಚುನಾವಣೆ ಅಕ್ರಮ ಕುರಿತಂತೆ ಕೇಂದ್ರ ತನಿಖಾ ದಳ (CBI) ತನಿಖೆಗೆ ಸಿಟಿಜನ್ ರೈಟ್ಸ್ ಫೌಂಡೇಷನ್ ಆಗ್ರಹಿಸಿದೆ.ಅಲ್ಲದೇ ರಾಜ್ಯಪಾಲರು ಫಲಿತಾಂಶ ತಡೆಹಿಡಿದ ಬೆನ್ನಲ್ಲೇ, ಸಿಬಿಐ ತನಿಖೆಗೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ CRF ದೂರು ನೀಡಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಅಕ್ರಮಗಳ ಬೆನ್ನತ್ತಿರುವ ಸಿಟಿಜನ್ ಸಿಟಿಜನ್ ರೈಟ್ಸ್ ಫೌಂಡೇಷನ್, ಮೆಡಿಕಲ್ ಕಾಲೇಜುಗಳಲ್ಲಿನ ಅಕ್ರಮ ಪ್ರವೇಶ, ನರ್ಸಿಂಗ್ ಕಾಲೇಜುಗಳ ವಿಚಾರದಲ್ಲಿನ ಭ್ರಷ್ಟಾಚಾರಗಳ ವಿರುದ್ದ ಸರಣಿ ದಾವೆಗಳ ಮೂಲಕ ಕಾನೂನು ಸಮರವನ್ನು ಬಿರುಸುಗೊಳಿಸಿದೆ. ಇದೀಗ RGUHS ಸೆನೆಟ್ ಸದಸ್ಯರ ಚುನಾವಣೆ ಅಕ್ರಮ ವಿರುದ್ದ ಕಾನೂನು ಹೋರಾಟಕ್ಕಿಳಿದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಅವರು ಸಲ್ಲಿಸಿರುವ ದೂರು ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ.
ಸೆನೆಟ್ ಚುನಾವಣಾ ಅಕ್ರಮ ಆರೋಪವು ಕೋಲಾಹಲ ಸೃಷ್ಟಿಸಿದ್ದು, ರಾಜ್ಯಪಾಲರು ಫಲಿತಾಂಶವನ್ನು ತಡೆಹಿಡಿದ ಬೆನ್ನಲ್ಲೇ ಸಿಬಿಐ ತನಿಖೆಗೆ ಕೋರಿ CRF ಮುಖ್ಯಸ್ಥ ಕೆ.ಎ.ಪಾಲ್ ದೂರು ಸಲ್ಲಿಸಿದ್ದಾರೆ.10.12.2024 ರಂದು ನಡೆದ RGUHS ಸೆನೆಟ್ ಸದಸ್ಯರ ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿದ್ದು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಚುನಾವಣೆಯಲ್ಲಿ ಹಲವಾರು ಅಭ್ಯರ್ಥಿಗಳು ಅರ್ಹ ಶಿಕ್ಷಣತಜ್ಞರು, “ಪ್ರಾಧ್ಯಾಪಕರಲ್ಲದ ಶಿಕ್ಷಕರು” ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಅರ್ಹ ವ್ಯಕ್ತಿಗಳ ಸ್ಪರ್ಧೆಗೆ ಹಿನ್ನಡೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸಾಂಸ್ಥಿಕ ಆಡಳಿತದಲ್ಲಿ ಸಾರ್ವಜನಿಕ ನಂಬಿಕೆ ಉಳಿಯಬೇಕಾದರೆ ತನಿಖೆಯನ್ನು CBIಗೆ ವಹಿಸುವುದು ಸೂಕ್ತ ಎಂದು ಕೆ.ಎ.ಪಾಲ್ ಅವರು ಸರ್ಕಾರದ ಗಮನಸೆಳೆದಿದ್ದಾರೆ.
RGUHS ಕಾಯಿದೆಯ (ಇನ್ನು ಮುಂದೆ ‘ಶಾಸನ’ ಎಂದು ಉಲ್ಲೇಖಿಸಲಾಗುತ್ತದೆ) ಶಾಸನ 5.5 ರ ಉಲ್ಲಂಘನೆ ಆಗಿರುವುದು ಕಂಡುಬಂದಿದೆ. ಮತದಾರರ ಪಟ್ಟಿಯಲ್ಲಿನ ಗೊಂದಲಗಳು, ಹೆಸರುಗಳ ಅಕ್ರಮ ಸೇರ್ಪಡೆ ನಡೆದಿದೆ ಎನ್ನಲಾಗುತ್ತಿದ್ದು, ನಾಮಪತ್ರ ಸಲ್ಲಿಕೆ ಗಡುವು ಮುಕ್ತಾಯದ ನಂತರವೂ ಪೂರಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿರುವ ನಡೆ ಅನೇಕಾನೇಕ ಅನುಮಾನಗಳನ್ನು ಹುಟ್ಟುಹಾಕಿದೆ.
ಪೂರ್ಣಕಾಲಿಕ ಶಿಕ್ಷಕರು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅರ್ಹರು ಎಂದು ಷರತ್ತು ವಿಧಿಸಲಾಗಿದೆ. ಆದರೆ ಮಾನದಂಡಗಳನ್ನು ಪೂರೈಸದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಲಾಗಿದೆ. ಸುಮಾರು 4,715 ಮಂದಿ ನರ್ಸಿಂಗ್ ವರ್ಗದ ಬೋಧಕರನ್ನು ಅರ್ಹ ಮತದಾರರು ಎಂದು ಪರಿಗಣಿಸಲಾಗಿದೆ. ಫಾರ್ಮಸಿ ಮತ್ತು ಯುನಾನಿ ವಿಭಾಗಗಳ ಬೋಧಕರನ್ನು ಹೊರಗಿಡಲಾಯಿತು. ಈ ಮೂಲಕ ನಿಸ್ಪಕ್ಷಪಾತ ಚುನಾವಣೆಗೆ ಅಪವಾದ ಎಂಬಂತೆ ಪ್ರಕ್ರಿಯೆ ನಡೆದಿದೆ ಎಂದು ಕೆ.ಎ.ಪಾಲ್ ದೂರಿದ್ದಾರೆ.ಅಧ್ಯಾಪಕರ ಸೋಗಿನಲ್ಲಿ ಮೋಸದ ಮತ ಚಲಾಯಿಸಿದ ನಿದರ್ಶನಗಳು ವರದಿಯಾಗಿವೆ. ಮತಕೇಂದ್ರದಲ್ಲಿ ಬೋಧನಾ ಸಿಬ್ಬಂದಿಯ ಸೋಗಿನಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದು ಸಿಕ್ಕಿಬಿದ್ದ ಸನ್ನಿವೇಶವೇ ಇದಕ್ಕೆ ಉದಾಹರಣೆಯಾಗಿದೆ.
ಮತದಾರರ ಗುರುತಿನ ಚೀಟಿಗಳನ್ನುಅಸುರಕ್ಷಿತ ಪಿಡಿಎಫ್ ಸ್ವರೂಪಗಳಲ್ಲಿ ನೀಡುವುದರಿಂದ ಚುನಾವಣಾ ಪ್ರಕ್ರಿಯೆ ಹಳಿತಪ್ಪಿದೆ. ಇದು ನಕಲಿ ಮತದಾನಕ್ಕೆ ಅನುಕೂಲ ಕಲ್ಪಿಸಿದ್ದು, ಚುನಾವಣಾ ಅಧಿಕಾರಿಗಳೂ ಕರ್ತವ್ಯವನ್ನು ಪರಿಪೂರ್ಣಗೊಳಿಸುವಲ್ಲಿ ವಿಫಲಾರಾಗಿದ್ದಾರೆ. ಮತದಾರರ ಗುರುತಿನ ಚೀಟಿಗೆ ಬದಲಾಗಿ ನಕಲಿ ಆಧಾರ್ ಕಾರ್ಡ್‌ಗಳ ಬಳಕೆಯಾಗಿದ್ದು, ಅನಧಿಕೃತ ವ್ಯಕ್ತಿಗಳು ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು. ಈ ಮೂಲಕ ಶಾಸನಬದ್ಧ ಆದೇಶಗಳನ್ನು ಜಾರಿಗೊಳಿಸುವಲ್ಲಿ ಆಗಿರುವ ವೈಫಲ್ಯವು ಚುನಾವಣಾ ಫಲಿತಾಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಿಆರ್‌ಎಫ್ ತನ್ನ ದೂರಿನಲ್ಲಿ ಬೆಳಕುಚೆಲ್ಲಿದೆ.
ಈ ವ್ಯಾಪಕ ಅಕ್ರಮಗಳ ಕುರಿತಂತೆ ಬಾಧಿತ ಅಭ್ಯರ್ಥಿಗಳ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು, ಚುನಾವಣಾ ಚುನಾವಣಾ ಫಲಿತಾಂಶಗಳನ್ನು ತಡೆಹಿಡಿಯುವಂತೆ RGUHS ಗೆ ನಿರ್ದೇಶಿಸಿದ್ದಾರೆ. (ಇದನ್ನು ವಿಶ್ವವಿದ್ಯಾಲಯವು ದಿನಾಂಕ 03.01.2025 ರ ಅಧಿಸೂಚನೆಯಲ್ಲಿ ತಿಳಿಸಿದೆ). ಈ ಚುನಾವಣಾ ಅಕ್ರಮವು ಶಾಸನಬದ್ದ ನಿಯಮಗಳ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆದಲ್ಲಿ ಮಾತ್ರ ಸತ್ಯಾಂಶ ಹೊರಬೀಳಲಿದೆ ಎಂದು ಸಿಆರ್‌ಎಫ್ ಅಧ್ಯಕ್ಷ ಕೆ.ಎ.ಪಾಲ್ ಅವರು ದೂರಿನಲ್ಲಿ ಹೇಳಿದ್ದಾರೆ.